ಭರ್ಜರಿಯಾಗಿ ಎಂಟ್ರಿ ಕೊಟ್ಟಿರುವ ನಟಸಾರ್ವಭೌಮನಿಗೆ ಎಲ್ಲೆಡೆ ಪ್ರೇಕ್ಷಕರು ಮೆಚ್ಚುಗೆ ಪಡಿಸುತ್ತಿದ್ದಾರೆ. ಬೆಂಗಳೂರಿನ ಪ್ರಸನ್ನ ಥಿಯೇಟರ್ ಅಲ್ಲಿ (ಫೆ.೬)ರಂದು ರಾತ್ರಿ ೧೦ ಘಂಟೆಗೆ ಮೊದಲ ಶೋ ಆರಂಭಗೊಂಡಿರುವುದು ವಿಶೇಷವಾಗಿದೆ. ಇನ್ನು ಊರ್ವಶಿ ಸೇರಿದಂತೆ ಹಲವು ಚಿತ್ರಮಂದಿರಗಳಲ್ಲಿ ರಾತ್ರಿ ೧೨ಘಂಟೆಗೆ ಚಿತ್ರ ಪ್ರದರ್ಶನ ಆರಂಭಗೊಂಡಿದ್ದು, ಸಾವಿರಾರು ಜನ “ನಟಸಾರ್ವಭೌಮನ” ಮೊದಲ ಶೋ ನೋಡಿ ಸಂತಸ ವ್ಯಕ್ತ ಪಡಿಸಿದ್ದಾರೆ.
ಇನ್ನೊಂದು ವಿಶೇಷ ಎಂದರೆ ಪುನೀತ್ ಮೊದಲ ಬಾರಿಗೆ ಹಾರರ್ ಸಿನಿಮಾ ಮಾಡಿದ್ದೂ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ. ಒಂದು ಆತ್ಮದ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡಿರುವ ಪವನ್ ಒಡೆಯರ್ ತುಂಬಾ ಅಚ್ಚುಕಟ್ಟಾಗಿ ಸಿನಿಮಾ ಮಾಡಿದ್ದಾರೆ ಎಂಬುದು ಪ್ರೇಕ್ಷಕರ ಅಭಿಪ್ರಾಯ.
ಸುಮಾರು 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಮಿಂಚಲಿರುವ ಈ ಸಿನಿಮಾದ ಮೇಲೆ ಅಗಾಧ ನಿರೀಕ್ಷೆಗಳಿವೆ. ಹೈದ್ರಾಬಾದ್, ಚೆನ್ನೈ, ಪುಣೆ, ಮುಂಬೈ ಸೇರಿದಂತೆ ಮುಂತಾದ ಕಡೆಯೂ ಸಿನಿಮಾ ತೆರೆ ಕಾಣಲಿದೆ. ತಾಂತ್ರಿಕ ಬಳಗ ದೊಡ್ಡದಾಗಿದ್ದು ಪವನ್ ಒಡೆಯರ್ ನಿರ್ದೇಶಿಸಿರುವ ಈ ಸಿನಿಮಾಗೆ ಡಿ. ಇಮ್ಮಾನ ಸಂಗೀತ ನೀಡಿದ್ದು ರಾಕ್ ಲೈನ್ ವೆಂಕಟೇಶ ಬಂಡವಾಳ ಹೂಡಿದ್ದಾರೆ ಮತ್ತು ಪೀಟರ್ ಹೆನ್ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದು ನೋಡುಗರ ಕಣ್ಣು ಕುಕ್ಕುವಂತಿವೆ. ಪುನೀತ್ ಜತೆ ನಾಯಕಿರಾಗಿ ರಚಿತಾ ರಾಮ್ ಮತ್ತು ಅನುಪಮಾ ಪರಮೇಶ್ವರ್ ಅವರು ನಟಿಸಿದ್ದಾರೆ. ಇನ್ನು ಹಿರಿಯ ನಟಿ ಬಿ. ಸರೋಜಾದೇವಿ, ಚಿಕ್ಕಣ್ಣ, ಸಾಧುಕೋಕಿಲ, ರವಿಶಂಕರ್ ಸೇರಿದಂತೆ ಹಲವು ಜನ ಪಾತ್ರವರ್ಗದಲ್ಲಿ ಕಾಣಿಸಿಕೊಂಡಿದ್ದಾರೆ.