ಜಗತ್ತಿನ ಭಾರೀ ತೂಕ ವ್ಯಕ್ತಿಯೊಬ್ಬರು ಕೇವಲ ಎರಡು ವರ್ಷದಲ್ಲಿ 300 ಕೆಜಿ ತೂಕವನ್ನು ಇಳಿಸಿ ಅಚ್ಚರಿ ಮೂಡಿಸಿದ್ದಾರೆ.ಮೆಕ್ಸಿಕೋದ ಅಗುಸ್ಕಲೆಂಟಿಸ್ ನಿವಾಸಿ ಜುವಾನ್ ಪೆಡ್ರೊ ಫ್ರಾಂಕೊ (34) ಅವರು 595 ಕೆಜಿ ತೂಕ ಹೊಂದಿದ್ದರು. ಆದರೆ ಕಳೆದ ಎರಡು ವರ್ಷಗಳಲ್ಲಿ ಫ್ರಾಂಕೊ ತಮ್ಮ ತೂಕವನ್ನು 304 ಕೆಜಿಗೆ ಇಳಿಸಿದ್ದಾರೆ.

ದೇಹದ ತೂಕದ ಮೂಲಕವೇ ಫ್ರಾಂಕೊ ಅವರು ಜಗತ್ತಿನಲ್ಲಿ ಹೆಸರಾಗಿದ್ದರು. ಅಷ್ಟೇ ಅಲ್ಲದೇ ಈ ಮೂಲಕ ವಿಶ್ವ ಅತ್ಯಂತ ಹೆಚ್ಚು ತೂಕದ ವ್ಯಕ್ತಿಯೆಂಬ ದಾಖಲೆ ಮಾಡಿದ್ದರು. ಆದರೆ ಈಗ ತೂಕವನ್ನು ಇಳಿಸಿಕೊಳ್ಳಲು ಫ್ರಾಂಕೊ ಮುಂದಾಗಿದ್ದಾರೆ.

ಫ್ರಾಂಕೊ ಅವರು ಕಳೆದ ಎರಡು ವರ್ಷಗಳಿಂದ ಅಗುಸ್ಕಲೆಂಟಿಸ್‍ನಿಂದ ತೆರಳಿ ಗ್ವಾಡಲಜರ, ಜಲಿಸ್ಕೊ ಪ್ರದೇಶಗಳ ವಿಶೇಷ ಆಸ್ಪತ್ರೆಗಳಲ್ಲಿ ದಾಖಲಾಗಿದ್ದರು. ಅಲ್ಲಿ ತೂಕ ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಶಸ್ತ್ರ ಚಿಕಿತ್ಸೆ ಪಡೆದಿದ್ದರು.

ನಾನು ಆರನೇ ವರ್ಷವಿದ್ದಾಗ ಅರವತ್ತು ಕೆಜಿ ತೂಕವಿದ್ದೆ. ಬಳಿಕ ಪ್ರತಿವರ್ಷ ಒಂಬತ್ತು ಕೆಜಿಯಂತೆ ದೇಹದ ತೂಕ ಹೆಚ್ಚಾಗುತ್ತಾ ಸಾಗಿತು. ಇದು ನನ್ನ ಹುಟ್ಟಿನಿಂದಲೇ ಬಂದಿರುವ ಕಾಯಿಲೆ ಅಂತ ನಿರ್ಲಕ್ಷ್ಯ ಮಾಡಿದೆ. ಪರಿಣಾಮ ಅನಾರೋಗ್ಯಕ್ಕೆ ತುತ್ತಾಗಬೇಕಾಯಿತು ಅಷ್ಟೇ ಅಲ್ಲದೆ ಆರ್ಥಿಕವಾಗಿಯೂ ನಾನು ಕುಂದುವಂತಾಯಿತು ಎಂದು ಜುವಾನ್ ಪೆಡ್ರೊ ಫ್ರಾಂಕೊ ಹೇಳಿಕೊಂಡಿದ್ದಾರೆ.

ಮುನ್ನೂರು ಕೆಜಿ ಇಳಿಕೆಯಾದ ಪರಿಣಾಮ ಫ್ರಾಂಕೊ ಅವರಿಗೆ ಈಗ ಹಾಸಿಗೆಯಿಂದ ಹೊರಬರಲು ಸ್ವತ ಬಟ್ಟೆ ಧರಿಸಲು, ನಡೆದಾಡಲು ಸಾಧ್ಯವಾಗಿದೆ. ಜೊತೆಗೆ ಮುಂದಿನ ವರ್ಷಗಳಲ್ಲಿ 138 ಕೆಜಿ ತೂಕವನ್ನು ಕಡಿಮೆ ಮಾಡಿಕೊಳ್ಳಲು ಫ್ರಾಂಕೊ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಮೊದಲಿಗೆ ನಾನು ಆರರಿಂದ ಹತ್ತು ಹೆಜ್ಜೆ ನಡುಯುತ್ತಿದ್ದಂತೆ ಕೆಳಗೆ ಕುಳಿತುಬಿಡುತ್ತಿದ್ದೆ. ಆದರೆ ಈಗ 100 ಹೆಜ್ಜೆ ಹಾಕಬಲ್ಲೆ ಅಥವಾ 40 ಹೆಜ್ಜೆಯಂತೆ 10 ಬಾರಿ ನಡೆದಾಡಬಲ್ಲೆ ಎಂದು ಜುವಾನ್ ಪೆಡ್ರೊ ಫ್ರಾಂಕೊ ಹೇಳಿಕೊಂಡಿದ್ದಾರೆ.

ಮೆಕ್ಸಿಕೋದ ಯುವ ಜನರು ಸಾಮಾನ್ಯವಾಗಿ ಹೆಚ್ಚು ತೂಕವನ್ನು ಹೊಂದಿರುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಕಳೆದ ವರ್ಷ ಮೇ ತಿಂಗಳಿನಲ್ಲಿ ಗ್ವಾಡಲಜರನಲ್ಲಿ ಜುವಾನ್ ಪೆಡ್ರೊ ಫ್ರಾಂಕೊ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಅಲ್ಲಿನ ವೈದ್ಯ ಜೋಸ್ ಕ್ಯಾಸ್ಟನೆಡಾ ಅವರು ಗ್ಯಾಸ್ಟ್ರಿಕ್ ಬೈಪಾಸ್ ಶಸ್ತ್ರ ಚಿಕಿತ್ಸೆ ಮಾಡಿದ್ದರು.

LEAVE A REPLY

Please enter your comment!
Please enter your name here