ಕಡಲೇ ಬೇಳೆ ಮ್ಯಾಂಗನೀಸ್, ಮೆಗ್ನೀಸಿಯಮ್, ರಂಜಕ ಮತ್ತು ಥೈಮಿನ್ಗಳಂತಹ ಖನಿಜಗಳಿಂದ ತುಂಬಿರುತ್ತದೆ. ಮ್ಯಾಂಗನೀಸ್ ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ, ಇದು ನಿಮ್ಮ ರಕ್ತದೊತ್ತಡವನ್ನು ನಿಯಂತ್ರಿಸಿ ರಕ್ತ ಹೀನತೆಯನ್ನು ತಡೆಯುತ್ತದೆ, ಆಹಾರ ಸರಿಯಾಗಿ ಜೀರ್ಣವಾಗುವಂತೆ ಮಾಡಿ ನಿಮ್ಮ ಕೊಲೆಸ್ಟ್ರಾಲ್ ಸಹ ಕಡಿಮೆ ಮಾಡಿ ಹೃದಯ ಸಮಸ್ಯೆ ಇಂದ ನಿಮ್ಮನ್ನು ಕಾಪಾಡುತ್ತದೆ, ಇಷ್ಟೆಲ್ಲಾ ಉಪಯೋಗ ಇರುವ ಈ ಕಡಲೆ ಬೇಳೆ ಬಳಸಿ ರುಚಿಯಾದ ಕೂಟು ಮಾಡುವ ಸುಲಭ ವಿಧಾನ ನಿಮಗಾಗಿ.

ಬೇಕಾಗುವ ಸಾಮಗ್ರಿಗಳು

ಕಡ್ಲೆಬೇಳೆ – ಒಂದು ಬಟ್ಟಲು

ವಿವಿಧರೀತಿಯ ಹೆಚ್ಚಿದ ತರಕಾರಿಗಳು-ಕ್ಯಾರೆಟ್, ಆಲೂಗೆಡ್ಡೆ, ಪಡವಲಕಾಯಿ, ಹೂಕೋಸು, ಸೋರೆಕಾಯಿ,

ಟಮೋಟೋ

ಈರುಳ್ಳಿ ಸಣ್ಣಗೆ ಹೆಚ್ಚಿದ್ದು

ಒಂದು ಹಸಿಮೆಣಸಿನ ಕಾಯಿ ಮದ್ಯಕ್ಕೆ ಸೀಳಿದ್ದು

ಎಣ್ಣೆ, ಸಾಸಿವೆ, ಕರಿಬೇವು

ಅರಿಶಿಣದ ಪುಡಿ

ಧನಿಯಾಪುಡಿ

ಖಾರದಪುಡಿ

ಸಾಂಬಾರ್ ಪುಡಿ (ಸಾರಿನ ಪುಡಿ)

ಉಪ್ಪು

ತೆಂಗಿನತುರಿ ಬೇಕಾದರೆ

ಕೊತ್ತುಂಬರಿಸೊಪ್ಪು

ಮಾಡುವ ವಿಧಾನ

ಕಡ್ಲೆಬೇಳೆಯನ್ನು,ಎಣ್ಣೆ ಒಂದು ಚಮಚ,ಸ್ವಲ್ಪ ಅರಿಶಿಣ ಹಾಕಿ,ಸ್ವಲ್ಪ ಗಟ್ಟಿಯಾಗಿಯೇ ಬೇಯಿಸಿಕೊಂಡು(ಕಡ್ಲೆಬೇಳೆಯನ್ನು ತುಂಬಾ ಮೆತ್ತಗೆ ಅಥವಾ ನುಣ್ಣಗೆ ಬೇಯಿಸ ಬೇಡಿ) ಅದಕ್ಕೆ ಹೆಚ್ಚಿದ ತರಕಾರಿಗಳು, ಸಾರಿನಪುಡಿ,ಖಾರದಪುಡಿ, ಧನಿಯಾಪುಡಿ, ಉಪ್ಪು ಮತ್ತು ಹಸಿಮೆಣಸಿನಕಾಯಿ ಹಾಕಿ ಚೆನ್ನಾಗಿ ಬೆರೆಸಿ, ತರಕಾರಿಗಳು ಬೇಯುವವರೆಗೂ ಬೇಯಿಸಿಕೊಳ್ಳಿ. ಈ ಸಮಯದಲ್ಲಿ ಬೇಳೆ ಹದವಾಗಿ ಬೇಯುತ್ತದೆ. ಕೊನೆಯಲ್ಲಿ ತೆಂಗಿನತುರಿ ಮತ್ತು ಕೊತ್ತುಂಬರಿ ಸೊಪ್ಪು ಮತ್ತು ಒಗ್ಗರಣೆಯನ್ನು ಹಾಕಿ ಚೆನ್ನಾಗಿ ಬೆರೆಸಿ, ಒಂದೆರಡು ನಿಮಿಷ ಕುದಿಸಿ ಇಳಿಸಿ. ಇದನ್ನು ಊಟಕ್ಕೆ ಅಥವಾ ಚಪಾತಿ ಅಥವಾ ಪೂರಿಯೊಂದಿಗೆ ತಿನ್ನಲು ಕೊಡಿ.

ಒಗ್ಗರಣೆ – ಎಣ್ಣೆಯನ್ನು ಬಿಸಿಮಾಡಿ, ಸಾಸಿವೆ, ಕರಿಬೇವು ಮತ್ತು ಈರುಳ್ಳಿಯನ್ನು ಹಾಕಿ ಒಂದೆರಡು ನಿಮಿಷ ಹದವಾಗಿ ಹುರಿದು ಅದನ್ನು ಬೆರೆಸಿ ಕುಕ್ಕರ್ ನಲ್ಲಿ ತಯಾರಿಸುವುದಾದರೆ ಬೇಳೆಯನ್ನು ಮೊದಲು 5-10 ನಿಮಿಷ ಬೇಯಿಸಿಕೊಂಡು, ಎಲ್ಲವನ್ನೂ ಹಾಕಿ ಮುಚ್ಚಿಟ್ಟು ಒಂದು ಕೂಗು ಕೂಗಿಸಿ ಇಳಿಸಿ.

LEAVE A REPLY

Please enter your comment!
Please enter your name here