ಹತ್ತೂರ ಭಕ್ತರನ್ನು ತನ್ನ ಶಕ್ತಿಯಿಂದ ಪೊರೆಯುತ್ತಿರುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರು ಹಾಗೂ ನಂಬಿದವರಿಗೆ ಇಂಬು ಕೊಡುತ್ತಾ ದುಷ್ಟರನ್ನು ಶಿಕ್ಷಿಸುತ್ತಾ ಬಂದಿರುವ ಬಲ್ನಾಡು ದಂಡನಾಯಕ ಉಳ್ಳಾಲ್ತಿ ದೈವ ಕ್ಷೇತ್ರಕ್ಕೂ ತನ್ನದೇ ಆದ ನಿಕಟ ಸಂಪರ್ಕ ಹಾಗೂ ಸಂಬಂಧ ಇದೆ. ಕ್ರೂರಿಯಾಗಿದ್ದ ಸ್ಥಾನೀಯ ಬಂಗರಸನನ್ನು ವಧಿಸಿ, ಪುತ್ತೂರಿನಲ್ಲಿ ಶಾಂತಿ ನೆಲೆಸುವಂತೆ ಮಾಡಿದ ಕೀರ್ತಿ ಉಳ್ಳಾಲ್ತಿ ಅಮ್ಮನಿಗೆ ಸಲ್ಲುತ್ತದೆ. ಇದೇ ಕಾರಣದಿಂದ ಉಳ್ಳಾಲ್ತಿ ಹಾಗೂ ಆಕೆಯ ಸಹೋದರ ದಂಡನಾಯಕರನ್ನು ಬಲ್ನಾಡುವಿನಲ್ಲಿ ನೆಲೆ ಮಾಡಲಾಗಿದೆ. ಹಾಗೂ ಪ್ರತಿದಿನ ಅವರು ಅಲ್ಲಿ ಪೂಜೆಗಳನ್ನು ಪಡೆಯುತ್ತಿರುವುದಾಗಿದೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಉಳ್ಳಾಲ್ತಿಯನ್ನು ಪ್ರಾರ್ಥಿಸುವ ಸಲುವಾಗಿಯೇ ಪಶ್ಚಿಮ ದಿಕ್ಕಿನಲ್ಲಿ ಗೋಪುರದಲ್ಲಿ ಸಣ್ಣ ಬಾಗಿಲನ್ನು ಇಡಲಾಗಿದೆ. ದೇವಾಲಯದಲ್ಲಿ ಪೂಜೆಯಾಗಿ ದಿನನಿತ್ಯದ ದೇವರ ಬಲಿ ಹೊರಡುವ ಮೊದಲು, ದೇವಾಲಯದಲ್ಲಿರುವ ಈ ಸಣ್ಣ ಬಾಗಿಲ ಬಳಿಗೆ ಹೋಗಿ ಉಳ್ಳಾಲ್ತಿಗೆ ಪ್ರಾರ್ಥನೆಯನ್ನು ಸಲ್ಲಿಸುವ ಪದ್ದತಿಯು ಒಂದು ಶಿಷ್ಟ ಸಂಪ್ರದಾಯದಂತೆ ನಡೆದುಕೊಂಡು ಬಂದಿದೆ. ಶ್ರೀ ದೈವಗಳಿಗೂ ಮತ್ತು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಇರುವ ನಿಕಟ ಸಂಬಂಧ ಅನಾದಿ ಕಾಲದಿಂದಲೂ ಇಂದಿನವರೆಗೂ ಮುಂದುವರೆದುಕೊಂಡು ಬಂದಿದೆ. ಇಂದಿಗೂ ದೇವಸ್ಥಾನದಲ್ಲಿ ನಿತ್ಯ ಪೂಜೆಯಾದ ಬಳಿಕ ಬಲಿ ಹೊರಡುವ ಮೊದಲು ದೇವರನ್ನು ಹೊರುವವರು ಉಳ್ಳಾಲ್ತಿ ಬಾಗಿಲಿನವರೆಗೆ ಬಂದು ಉಳ್ಳಾಲ್ತಿಯನ್ನು ಪ್ರಾರ್ಥಿಸಿ ” ಬಲಿಗೆ ದಾರಿ ಬಿಡಿ” ಎಂದು ಹೇಳುವ ಪದ್ಧತಿ ಇಂದೂ ಇದೆ. ಅಲ್ಲದೆ ಜಾತ್ರೆ ಸಮಯದಲ್ಲಿ ಕೆರೆ ಆಯನದ ದಿವಸ ರಾತ್ರಿ ಧನುರ್ಬಾಣ, ಬಾಳುಭಂಡಾರ, ತೀರ್ಪಾಳ ದಂಡಿಗೆ, ಛತ್ರಪತಾಕೆ, ಬಿರುದು ಬಾವಲಿಗಳೊಂದಿಗೆ ತೆಂಗಿನ ಮರದ ಮಡಲಿನ (ಒಣಗಿದ ಗರಿ) ಸೂಟೆ (ಗರಿಗಳನ್ನು ಒಟ್ಟು ಸೇರಿಸಿ ಕಟ್ಟಿದ್ದು)ಯ ಬೆಳಕಿನಲ್ಲಿ ಶ್ರೀ ಉಳ್ಳಾಲ್ತಿ ತನ್ನ ಪರಿವಾರದೊಂದಿಗೆ ವೈಭವದಿಂದ ದೇವರ ಸನ್ನಿಧಿಗೆ ಭಂಡಾರ ಬರುತ್ತದೆ. ದೇವರ ಜತೆಯಲ್ಲಿ ರಥೋತ್ಸವದಂದು ಅಂಕದಕಟ್ಟೆಯವರೆಗೆ ಬಂದು ಅಲ್ಲಿಂದ ದೇವರನ್ನು ಬೀಳ್ಕೊಟ್ಟು ಮತ್ತೆ ಬಲ್ನಾಡು ಬೀಡಿಗೆ ಹಿಂದಿರುಗುತ್ತದೆ. ಈ ಕಟ್ಟೆಯು ನಟ್ಟೋಜಿ ಮನೆತನದ್ದಾಗಿದೆ

ಇತಿಹಾಸ: ಪ್ರಾಚೀನ ತೀರ್ಥ ಕ್ಷೇತ್ರಗಳಲ್ಲೊಂದಾದ ನೇತ್ರಾವತಿ – ಕುಮಾರಧಾರ ನದಿಗಳ ಸಂಗಮ ತೀರದಲ್ಲಿ ನೆಲೆಗೊಂಡಿರುವ ಪರಶಿವನ ಪವಿತ್ರ ತಾಣ- ಶ್ರೀ ಸಹಸ್ರಲಿಂಗೇಶ್ವರನ ಪರಮ ಸನ್ನಿಧಿ. ಉತ್ತರದಲ್ಲಿ ಕಾಶಿ ವಿಶ್ವನಾಥ, ಮಹಾಕಾಳಿ ವೀರಭದ್ರ ಸನ್ನಿಧಿಯಿದ್ದು ಉತ್ತರ ಕಾಶಿಯೆಂದು ಪ್ರಸುದ್ಧವಾದರೆ, ದಕ್ಷಿಣದಲ್ಲಿ ಸಹಸ್ರಲಿಂಗೇಶ್ವರ ಮಹಾಕಾಳಿ ಕಾಲಭೈರವನಿದ್ದು, ದಕ್ಷಿಣ ಕಾಶಿಯೆಂದು ಪ್ರಖ್ಯಾತವಾಗಿದೆ. ಗಂಗೆ-ಯಮುನೆಯರ ಸಂಗಮವಾಗಿ ಪ್ರಯಾಗವೆಂದು ಸಹಸ್ರಲಿಂಗೇಶ್ವರನ ಸನ್ನಿಧಿ ಪ್ರಸಿದ್ಧಿಯನ್ನು ಪಡೆದಿದೆ. ಉತ್ತರದ ಪ್ರಯಾಗ, ದಕ್ಷಿಣದ ಗಯಾಪದ ಭಕ್ತಿ ಮುಕ್ತಿಗಳೆರಡನ್ನು ಕರುಣಿಸುವ ಸಹಸ್ರಲಿಂಗೇಶ್ವರ ಸನ್ನಿಧಿ ಸದ್ಗತಿದಾಯಕವಾದ ಕ್ರಿಯೆಗಳ ಮೂಲಕ ಮೋಕ್ಷಧಾಮವೆನಿಸಿದೆ. ಈ ದೇಗುಲವು ಫೆಬ್ರವರಿ 2002 ರಲ್ಲಿ ಸಭಕ್ತರ ತನು-ಮನ-ಧನದ ನೆರವಿನಿಂದ ಸುಮಾರು 1.5 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕೃತಗೊಂಡು ಬ್ರಹ್ಮಕಲಶೋತ್ಸವಗಳು ವೈಭವೋಪೇತವಾಗಿ ಜರುಗಿದೆ. ಶ್ರೀ ಕ್ಷೇತ್ರದಲ್ಲಿ ಶ್ರಿ ಮಹಾಕಾಳಿ ದೇವಿಯ ದೇಗುಲವಿದೆ. ನೇತ್ರಾವತಿ ನದಿಯ ಉತ್ತರಕ್ಕೆ ಕಲ್ಕುಡ ದೈವಸ್ಥಾನವಿರುತ್ತದೆ.

ದೇವಸ್ಥಾನದ ಸಮಯ:
ಬೆಳಿಗ್ಗೆ : 6 ಗಂಟೆಯಿಂದ ಮಧ್ಯಾಹ್ನ 1:30 ಗಂಟೆವರೆಗೆ
ಸಾಯಂಕಾಲ 5 ಗಂಟೆಯಿಂದ to ಸಾಯಂಕಾಲ 8 ಗಂಟೆಯವರೆಗೆ

ಪೂಜೆ ಸಮಯ:
ಬೆಳಿಗ್ಗೆ : 07:30 ಗಂಟೆಗೆ
ಮಧ್ಯಾಹ್ನ : 12:00 ಗಂಟೆಗೆ
ಸಾಯಂಕಾಲ : 07:00 ಗಂಟೆಗೆ

ದೇವಸ್ಥಾನದ ವಿಳಾಸ:
ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನ,
ಉಪ್ಪಿನಂಗಡಿ,
ಪುತ್ತೂರು ತಾಲ್ಲೂಕು,
ದಕ್ಷಿಣ ಕನ್ನಡ ಜಿಲ್ಲೆ.
ದೂರವಾಣಿ ಸಂಖ್ಯೆ : 08251 – 251015

LEAVE A REPLY

Please enter your comment!
Please enter your name here