ನಂಜನಗೂಡು ಪ್ರಸಿದ್ಧವಾಗಿರುವುದು ಇಲ್ಲಿಯ ಶ್ರೀಕಂಠೇಶ್ವರ (ನಂಜುಂಡೇಶ್ವರ) ದೇವಾಲಯದಿಂದ. ಕರ್ನಾಟಕದ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿರುವ ಇದು ಊರಿನ ಪೂರ್ವದ ಅಂಚಿನಲ್ಲಿ ಕಪಿಲಾ ಮತ್ತು ಗುಂಡ್ಲುಹೊಳೆಯ (ಕೌಂಡಿನ್ಯ ನದಿ) ಸಂಗಮದ ಬಳಿ ಪೂರ್ವಾಭಿಮುಖವಾಗಿದೆ. ನದಿಗಳಲ್ಲಿ ಪ್ರವಾಹ ಬಂದಾಗ ದೇವಾಲಯದಿಂದ ಕೇವಲ ತೊಂಬತ್ತು ಮೀಟರುಗಳಷ್ಟು ದೂರದವರೆಗೆ ಸಂಗಮದಲ್ಲಿ ನೀರು ಬರುತ್ತದೆ. ಶ್ರೀಕಂಠೇಶ್ವರ ದೇವಾಲಯ ದ್ರಾವಿಡ ಶೈಲಿಯ ಕಟ್ಟಡ. ಇದು 117 ಮೀ. ಉದ್ದ, 48 ಮೀ. ಅಗಲ ಇದೆ. ಇದರಲ್ಲಿ 147 ಕಂಬಗಳಿವೆ. ಇದರ ಒಟ್ಟು ಆಚ್ಛಾದಿತ ಪ್ರದೇಶ 4,831 ಚ.ಮೀ. ಇದು ಕರ್ನಾಟಕದಲ್ಲೇ ಅತ್ಯಂತ ದೊಡ್ಡ ದೇವಸ್ಥಾನ. ಹೊರಗೋಡೆಗಳು ಸುಮಾರು 3.7 ಮೀ. ಎತ್ತರವಾಗಿವೆ. ಸುತ್ತಲೂ ದಕ್ಷಿಣ, ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ ಅಧಿಷ್ಠಾನ, ಹಿಂದೆ ಗೋಡೆ, ಮುಂದೆ ಕಂಬಸಾಲಿರುವ ಕೈಸಾಲೆ ಇವೆ. (ಈಗ ದಕ್ಷಿಣದ ಕೈಸಾಲೆಯನ್ನು ಪೂರ್ಣವಾಗಿಯೂ ಉತ್ತರದ್ದನ್ನು ಸ್ವಲ್ಪ ಭಾಗಗಳಲ್ಲಿಯೂ ಮುಚ್ಚಲಾಗಿದೆ). ಮೇಲೆ ಸುತ್ತಲೂ ದೇವ ಮತ್ತು ಇತರ ಶಿಲ್ಪಗಳಿರುವ ಕೂಟ ಮತ್ತು ಶಿಖರಗಳ ಗಚ್ಚಿನ ಹಾರ ಇದೆ. ಪೂರ್ವಭಾಗದಲ್ಲಿನ ಮಹಾದ್ವಾರದ ಮುಂದೆ ಇಕ್ಕೆಡೆ ಕೈಸಾಲೆಯಿರುವ ಒಂದು ಮುಖಮಂಟಪವಿದೆ. ಮಹಾದ್ವಾರ ಬೃಹತ್ ರಚನೆ. ಒಳಚಾವಣಿಯ ಎತ್ತರ ಸುಮಾರು 5.5 ಮೀ. ವಿಶಾಲ ಮಂಟಪದಂತಿರುವ ಈ ಭಾಗದಲ್ಲಿನ ದಪ್ಪ ಎತ್ತರದ ಬಾಗಿಲ ತೋಳುಗಳ ಮೇಲೆ ಮೋಹಿನಿ, ದ್ವಾರಪಾಲಕ ಮೊದಲಾದ ಶಿಲ್ಪಾಲಂಕರಣಗಳಿವೆ. ಮಹಾದ್ವಾರದ ಮೇಲೆ ಏಳು ಅಂತಸ್ತುಗಳಲ್ಲಿ ಎದ್ದಿರುವ ಸುಮಾರು 37 ಮೀ. ಎತ್ತರದ ಬೃಹತ್ ಗೋಪುರದ ಮೇಲ್ತುದಿಯಲ್ಲಿ ಚಿನ್ನದ ಗಿಲೀಟಿನ, 3 ಮೀಟರುಗಳಿಗೂ ಎತ್ತರವಾಗಿರುವ, ಏಳು ಕಲಶಗಳನ್ನು ಅಷ್ಟೇ ಎತ್ತರದ ಎರಡು ಕೊಂಬುಗಳ ಮಧ್ಯೆ ಸಾಲಾಗಿ ಜೋಡಿಸಲಾಗಿದೆ.

ಮಹಾದ್ವಾರದಿಂದ ಒಳಗೆ ಪ್ರವೇಶಿಸುತ್ತಿದ್ದಂತೆಯೇ ದೊಡ್ಡ ತೆರೆದ ಅಂಗಳವುಂಟು. ಇದರ ಮಧ್ಯಭಾಗದಲ್ಲಿ ಸುಂದರವಾದ ಒಂದು ವಸಂತ ಮಂಟಪ, ಆಗ್ನೇಯದಲ್ಲಿ ಪಾಕಶಾಲೆ ಮತ್ತು ಈಶಾನ್ಯದಲ್ಲಿ ಉಗ್ರಾಣ ಇವೆ. ದಕ್ಷಿಣದ ಭಾಗದಲ್ಲಿ ಒಂದು ಪ್ರವೇಶದ್ವಾರವುಂಟು. ಅಂಗಳದ ಇಕ್ಕೆಲದಲ್ಲೂ ಎತ್ತರದ ಎರಡು ಕಂಬಸಾಲುಗಳು ಉದ್ದುದ್ದವಾಗಿ ಹಬ್ಬಿವೆ. ಒಳಸಾಲಿನ ಹಿಂದಿನ ಅಂಕಣಗಳಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಅಂಗಳದ ಹಿಂದೆ ದೇವಾಲಯದ ಹಿಂಗೋಡೆಯವರೆಗೂ ಇರುವ ಈ ಭಾಗ ಪೂರ್ಣವಾಗಿ ಆಚ್ಛಾದಿತವಾಗಿರುವುದಲ್ಲದೆ ಅಂಗಳಕ್ಕಿಂತ ಸ್ವಲ್ಪ ಎತ್ತರದಲ್ಲಿದೆ. ಇಲ್ಲಿ ಮಧ್ಯದಲ್ಲಿರುವ ಗುಡಿಗಳನ್ನು ಬಿಟ್ಟು ಉಳಿದ ಭಾಗವನ್ನೆಲ್ಲ ಉದ್ದುದ್ದವಾಗಿ ಹಬ್ಬಿರುವ ಕಂಬಸಾಲುಗಳು ವಿಂಗಡಿಸುತ್ತವೆ. ಅಂಗಳದಿಂದ ಮುಂದಕ್ಕೆ ಹೋಗುತ್ತಿದ್ದಂತೆಯೇ ಮೊದಲು ಸಿಗುವುದು ಬಸವನಕಟ್ಟೆ. ಇದು ವಸಂತ ಮಂಟಪದ ಎದುರಿಗೆ ಇರುವ ವಿಶಾಲವಾದ ಜಗತಿ. ಇದರ ಮೇಲೆ ಮಧ್ಯಸ್ಥಳದಲ್ಲಿ ಚಾವಣಿಯನ್ನೂ ಮೀರಿ ಮೇಲೆದ್ದಿರುವ ಅಷ್ಟಮುಖದ ಶಿಲಾದೀಪಸ್ತಂಭವಿದೆ. ಇದರ ಈಶಾನ್ಯ ಭಾಗದಲ್ಲಿರುವುದು ಬೃಹನ್ನಂದಿಯ ಗುಡಿ. ಕಟ್ಟೆಯ ವಾಯುವ್ಯದಲ್ಲಿ ಎತ್ತರವಾದ ಅಧಿಷ್ಠಾನದ ಮೇಲಿರುವುದು ತಾಂಡವೇಶ್ವರ ಗುಡಿ. ಕಟ್ಟೆಯ ಪಶ್ಚಿಮಕ್ಕೆ ಇರುವ ಮತ್ತೊಂದು ಮಹಾದ್ವಾರ ಈಗ ಕಟ್ಟಡದ ಒಳಗೆ ಸೇರಿಹೋಗಿದೆ. ಆದರೆ ಹಿಂದೆ ಇದು ದೇವಾಲಯದ ಮುಖ್ಯ ಪ್ರವೇಶದ್ವಾರವಾಗಿತ್ತು.

ಇದರ ಕೆಳಭಾಗ ಕಲ್ಲಿನ ಕಟ್ಟಡ. ಇದರ ಚಾವಣಿಯ ಮೇಲೆ ಐದು ಅಂತಸ್ತುಗಳು ಮತ್ತು ಚಿನ್ನದ ಗಿಲೀಟಿನ ಐದು ಕಲಶಗಳು ಇರುವ ಸುಮಾರು 18 ಮೀ. ಎತ್ತರದ ಇಟ್ಟಿಗೆ ಮತ್ತು ಗಾರೆಯ ಶಿಖರವುಂಟು. ಈ ಮಹಾದ್ವಾರಕ್ಕೆ ಸೇರಿದಂತೆಯೇ ಬಲಪಾಶ್ರ್ವ ಮತ್ತು ಮುಂಭಾಗದಲ್ಲಿ ಕೆಲವು ಚಿಕ್ಕ ಗುಡಿಗಳಿವೆ. ಎಡಪಾಶ್ರ್ವದಲ್ಲಿ ನವಗ್ರಹಗಳಿರುವ ಒಂದು ಆವರಣವೂ ಅದರ ಹಿಂದೆ ಯಜ್ಞಶಾಲೆಯೂ ಇವೆ. ಈ ಮಹಾದ್ವಾರದ ಪಶ್ಚಿಮಕ್ಕಿರುವುದೇ ಶ್ರೀಕಂಠೇಶ್ವರ ಲಿಂಗವಿರುವ ಮೂಲ ಗುಡಿ. ಇದಕ್ಕೂ ಮಹಾದ್ವಾರಕ್ಕೂ ಮಧ್ಯೆ ಒಂದು ಕಲ್ಲಿನ ಬಲಿಪೀಠವೂ ಅದರ ಮೇಲೆ ಹಿತ್ತಾಳೆಯ ಹೊದಿಕೆಯಿರುವ ಸುಮಾರು 7.6 ಮೀ. ಎತ್ತರದ ಮರದ ಯಷ್ಟಿ ಇರುವ ಧ್ವಜಸ್ತಂಭವೂ ಇದೆ.

ಮೂಲ ದೇವಾಲಯದಲ್ಲಿ ಗರ್ಭಗುಡಿ, ಸುತ್ತಲೂ ಪ್ರದಕ್ಷಿಣಾಪಥ ಮತ್ತು ಮುಂದೆ ಎರಡು ಕಂಬಗಳಿರುವ ಒಂದು ಒಳಮಂಟಪ ಇವೆ. ಅದರ ಮುಂದೆ 9 ಕಂಬಗಳ ಸಭಾಮಂಟಪ. ಹಿಂದೆ ಇದಕ್ಕೆ 16 ಕಂಬಗಳಿದ್ದವು. ಕೆಲವು ಕಂಬಗಳ ಮಧ್ಯೆ ಗೋಡೆಗಳನ್ನೆತ್ತಿ, ದಕ್ಷಿಣಾಭಿಮುಖವಾಗಿ ಉತ್ಸವ ವಿಗ್ರಹವಿರುವ ಒಂದು ಗುಡಿಯನ್ನೂ ಮುಂದೆ ಎರಡು ಪಕ್ಕಗಳಲ್ಲಿ ಮೂರು ಮೂರು ಲಿಂಗಸ್ಥಾಪಿತ ಮಂದಿರಗಳನ್ನೂ ಅಳವಡಿಸಲಾಗಿದೆ. ಮಂಟಪದ ಪೂರ್ವ ಮತ್ತು ದಕ್ಷಿಣದ ಎಡೆಗಳಲ್ಲಿ ದ್ವಾರಗಳಿವೆ. ದಕ್ಷಿಣದ್ವಾರದ ಬಲಗಡೆ ಸುಬ್ರಹ್ಮಣ್ಯನನ್ನೂ ಎಡಪಕ್ಕಗಳಲ್ಲಿ ಲಿಂಗಗಳನ್ನೂ ಸ್ಥಾಪಿಸಲಾಗಿದೆ. ಗರ್ಭಗುಡಿಯ ಬಲಭಾಗದಲ್ಲೂ ಹೊರಗಡೆ ಕೆಲವು ಲಿಂಗಗಳು ಇವೆ. ಮೂಲ ದೇವಾಲಯಕ್ಕೆ ಸೇರಿದಂತೆ ಎಡಗಡೆ ವಿಷ್ಣು ಗುಡಿಯೂ ಅದರ ಹಿಂದೆ ಚಂಡಿಕೇಶ್ವರ ಗುಡಿಯೂ ಇವೆ. ಈ ಘಟಕದ ವಾಯವ್ಯದಲ್ಲಿ ಗರ್ಭಗುಡಿ ಮತ್ತು ಮುಂದೆ ಸಭಾಮಂಟಪವಿರುವ ಪಾರ್ವತಿ ಗುಡಿ ಇವೆ. ದೇವಾಲಯದ ಬಲಭಾಗದಲ್ಲಿ ಪ್ರಾಕಾರದ ಗೋಡೆಗೂ ಅದರ ಸದ್ಯ ಮುಂದಿನ ಕಂಬ ಸಾಲೆಗೂ ಮಧ್ಯೆ ಇರುವ ಅಂಕಣಗಳಲ್ಲಿ ಅನೇಕ ದೇವರುಗಳನ್ನು ಪ್ರತಿಷ್ಠಾಪಿಸಲಾಗಿದೆ. ಇವುಗಳಲ್ಲಿ ದಕ್ಷಿಣದ ಗೋಡೆಗೆ ಸೇರಿದಂತೆ ಅಂಗಳದ ನೇರದಿಂದ ಪ್ರಾರಂಭವಾಗುವ ಸಾಲಿನಲ್ಲಿ ಶೈವ ಪುರಾತನರ ವಿಗ್ರಹಗಳೂ ಮುಂದೆ ಲಿಂಗಗಳೂ ಮುಮ್ಮಡಿ ಕೃಷ್ಣರಾಜ ಒಡೆಯರ ಮತ್ತು ಅವರ ಪತ್ನಿಪುತ್ರರ ವಿಗ್ರಹಗಳು ಇರುವ ಒಂದು ಕೋಣೆಯೂ ಪಶ್ಚಿಮದ ಸಾಲಿನಲ್ಲಿ ಲಿಂಗಗಳೂ ಇತರ ಕೆಲವು ವಿಗ್ರಹಗಳೂ ಇವೆ. ಉತ್ತರದ ಗೋಡೆಗೆ ಸೇರಿದಂತೆ ಉಗ್ರಾಣದ ಬಳಿಯಿಂದ ಸಾಲಾಗಿರುವವು ಲೀಲಾ ಮೂರ್ತಿಗಳು. ಚಾವಣಿಯ ಮೇಲುಗಡೆ ಶ್ರೀಕಂಠೇಶ್ವರ, ನಾರಾಯಣ, ಪಾರ್ವತಿ, ಚಂಡಿಕೇಶ್ವರ ಮತ್ತು ತಾಂಡವೇಶ್ವರ ದೇವರುಗಳ ಗರ್ಭಗುಡಿಗಳ ಮೇಲೆ ಚಿಕ್ಕವಾದ ಗಾರೆಯ ಶಿಖರಗಳುಂಟು.

ಇಡೀ ದೇವಾಲಯ ಒಂದು ಕಾಲದ ರಚನೆಯಲ್ಲ. ದೇವಾಲಯದ ಬೆಳವಣಿಗೆಯಲ್ಲಿ ಕನಿಷ್ಠ ನಾಲ್ಕು ಘಟ್ಟಗಳನ್ನು ಸ್ಪಷ್ಟವಾಗಿ ಗುರುತಿಸಬಹುದು. ಶ್ರೀಕಂಠೇಶ್ವರ ಲಿಂಗ, ಗರ್ಭಗುಡಿ ಪ್ರದಕ್ಷಿಣಾಪಥ ಮತ್ತು ಬಹುಶಃ ಒಳಮಂಟಪ ಇವು ಬಹು ಪ್ರಾಚೀನವಾದುವು. ಈ ಭಾಗ ಕುಳ್ಳಾದ ಚಿಕ್ಕ ಕಟ್ಟಡ. ಗೋಡೆಯನ್ನು ಸರಳವಾಗಿ ಚಪ್ಪಡಿಗಳಿಂದ ಕಟ್ಟಲಾಗಿದೆ. ಹೊರಮೈಯಲ್ಲಿ ಅಧಿಷ್ಠಾನ, ಭಿತ್ತಿಭಾಗದಲ್ಲಿ ಅರೆಗಂಬಗಳು, ಮೇಲೆ ಬಳುಕಿನ ಕಪೋತ ಇವೆ. ಇದರ ಮೇಲೆ ಚಿಕ್ಕ ಯಾಳಿ ಸಾಲಿದ್ದಂತೆ ತೋರುತ್ತದೆ. ಉತ್ತರ, ಪಶ್ಚಿಮ ಮತ್ತು ದಕ್ಷಿಣದ ಗೋಡೆಗಳಲ್ಲಿ ಕಿರಿದಾದ ಜಾಲಂಧ್ರಗಳುಂಟು. ಒಳಮಂಟಪದ ಕಂಬಗಳು ದುಂಡು, ಬಹು ಕುಳ್ಳು. ಈ ಭಾಗವನ್ನು ಗಂಗರ ಅಥವಾ ಚೋಳರ ಕಾಲದಲ್ಲಿ 10-11ನೆಯ ಶತಮಾನಗಳಲ್ಲಿ ಕಟ್ಟಿರಬಹುದೆಂಬುದನ್ನು ಇದರ ಲಕ್ಷಣಗಳು ಸೂಚಿಸುತ್ತವೆ. ಇದರ ಮುಂಭಾಗದಲ್ಲಿರುವ ಮಂಟಪದಲ್ಲಿ ವಿವಿಧ ಮಾದರಿಯ ಕಂಬಗಳುಂಟು. ಇದನ್ನು ಹೊಯ್ಸಳರ ಕಾಲದಲ್ಲಿ ಸು. 13ನೆಯ ಶತಮಾನದಲ್ಲಿ ರಚಿಸಿರಬಹುದೆಂಬುದನ್ನು ಈ ಕಂಬಗಳ ರೀತಿಗಳಿಂದ ಊಹಿಸಬಹುದು. ಈ ಭಾಗದ ಮುಂದಿರುವ ಬಲಿಪೀಠವೂ ಬಹುಶಃ ಈ ಕಾಲದ್ದು. ಒಳಗಿನ ಮಹಾದ್ವಾರದ ಕಲ್ಲಿನ ಭಾಗದಲ್ಲಿ ಇಕ್ಕೆಲದಲ್ಲೂ ಹಂಪೆಯ ರಚನೆಗಳನ್ನು ಹೋಲುವ ಕಂಬಗಳುಂಟು. ಮೇಲಿನ ಗಾರೆಯ ಗೋಪುರ ವಿನ್ಯಾಸದಲ್ಲೂ ವಿಜಯನಗರ ಶೈಲಿಯನ್ನು ಗುರುತಿಸಬಹುದು. ದೇವಾಲಯದಲ್ಲಿ ಕೃಷ್ಣದೇವರಾಯನ (1509-29) ಒಂದು ದತ್ತಿಶಾಸನವೂ ಇರುವುದರಿಂದ ಈ ಮಹಾದ್ವಾರ ಮತ್ತು ಗೋಪುರ ಅವನ ಕಾಲದ ರಚನೆಯಿರಬಹುದು. ಪಾರ್ವತಿ ಮತ್ತು ನಾರಾಯಣ ಗುಡಿಗಳು ಮತ್ತು ಬಸವನ ಕಟ್ಟೆಯ ಮೇಲಿರುವ ದೀಪಸ್ತಂಭ ಸಹ ಇದೇ ಕಾಲದಲ್ಲಿ ರಚಿತವಾಗಿರುವಂತೆ ತೋರುತ್ತದೆ. ಮುಂದೆ ಮೈಸೂರು ಅರಸರು, ಕಳಲೆಯ ದಳವಾಯಿಗಳು ಮತ್ತು ದಿವಾನ್ ಪೂರ್ಣಯ್ಯ ಇವರು ದೇವಾಲಯದಲ್ಲಿ ಕೆಲವು ಮಾರ್ಪಾಟುಗಳನ್ನು ಮಾಡಿದರೆಂಬುದಕ್ಕೆ ಸಾಂದರ್ಭಿಕ ಸಾಕ್ಷ್ಯಗಳಿವೆ. ಆದರೆ ಯಾವ ಯಾವ ಭಾಗಗಳು ರಚಿತವಾದುವೆಂದು ತೀರ್ಮಾನಿಸುವುದು ಕಷ್ಟ. ದೇವಾಲಯ ಇಂದಿನ ರೂಪವನ್ನು ತಳೆದುದು ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ. ದೇವಾಲಯದ ಒಳಗೆ ಮತ್ತು ಸುತ್ತಲೂ ಹಬ್ಬಿರುವ ಸಾಲುಕಂಬಗಳು ಚತುರ್ಮುಖವಾಗಿದ್ದು ಮಧ್ಯೆ ಮಧ್ಯೆ ಅಷ್ಟಕೋನವಾಗಿ ಒಡೆದಿದೆ. ಈ ಕಂಬಗಳು ಮತ್ತು ಇವುಗಳ ಮೇಲಿನ ಶಿಲ್ಪಗಳ ರೀತಿಯಿಂದ ಇವು ಹೆಚ್ಚಿನ ಮಟ್ಟಿಗೆ 17-19ನೆಯ ಶತಮಾನದವೆಂದು ಹೇಳಬಹುದು. ಮೂಲಗುಡಿಯ ಮುಂಭಾಗದ ಕೋಣೆಗಳಲ್ಲಿ ಇರುವ ಲಿಂಗಗಳು 19ನೆಯ ಶತಮಾನದಲ್ಲಿ ಪ್ರತಿಷ್ಠಿತವಾದವು. 1820ರ ಅನಂತರದಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರು ದೇವಾಲಯದಲ್ಲಿ ಬದಲಾವಣೆಗಳನ್ನು ಮಾಡಿಸಲು ಆರಂಭಿಸಿ ಹಿಂದಿದ್ದ ಹಲವು ಭಾಗಗಳನ್ನು ಉಪಯೋಗಿಸಿಕೊಂಡು ಇಂದಿನ ಕಟ್ಟಡವನ್ನು ರೂಪಿಸಿದಂತೆ ತೋರುತ್ತದೆ. ದೇವಾಲಯದ ಮುಂದಿರುವ ಮಹಾಗೋಪುರವನ್ನು ಅವರು 1845ರಲ್ಲಿ ನಿರ್ಮಿಸಿದರು. ಈ ವಿಷಯವನ್ನು ಸೂಚಿಸುವ ಶಾಸನ ಮಹಾದ್ವಾರದ ದೂಲದ ಮೇಲೆ ಇದೆ. ಬಹುಶಃ ಇದೇ ಕಾಲದಲ್ಲಿ ದೇವಾಲಯಕ್ಕೆ ಇಂದಿನ ರೂಪ ಬಂದಂತೆ ತೋರುತ್ತದೆ. ಮಹಾದ್ವಾರದ ಮುಂದಿನ ಅನೇಕ ಶಿಲ್ಪಗಳಿಂದ ಕೂಡಿದ ಸುಂದರ ಮಂಟಪವನ್ನು ಸುಮಾರು 1900ರಲ್ಲಿ ನೀಲಗಿರಿ ಮುದ್ದಣ್ಣ ಎಂಬವರು ಕಟ್ಟಿಸಿದರು.

ದೇವಾಲಯದಲ್ಲಿ ಸುಮಾರು 200ಕ್ಕೂ ಹೆಚ್ಚು ವಿಗ್ರಹಗಳು ಪ್ರತಿಷ್ಠಾಪಿತವಾಗಿವೆ. ಇವುಗಳಲ್ಲಿ ಅರ್ಧದಷ್ಟು ಲಿಂಗಗಳು. ನಂಜುಂಡೇಶ್ವರ ಲಿಂಗ ಹಳೆಯದು; ಪೀಠಯುತವಾಗಿ ಸುಮಾರು 9 ಮೀ. ಎತ್ತರವಿದೆ. ಇತರ ಲಿಂಗಗಳ ಪೈಕಿ ಹೆಚ್ಚಿನವು ಬೇರೆಬೇರೆ ಕಾಲಗಳಲ್ಲಿ ಸ್ಥಾಪಿತವಾದವು. ಹೆಚ್ಚಿನವು ಪ್ರಾಕಾರದ ಗೋಡೆಗೆ ಸೇರಿದಂತಿರುವ ಒಳಸಾಲಿನಲ್ಲಿವೆ. ಗರ್ಭಗುಡಿಯ ಸಭಾಮಂಟಪದಲ್ಲಿಯೂ ದೇವಾಲಯದ ಈಶಾನ್ಯ ಮತ್ತು ವಾಯವ್ಯ ಭಾಗದ ಕೋಣೆಗಳಲ್ಲಿಯೂ ಅಲ್ಲಲ್ಲಿ ಬಿಡಿಬಿಡಿಯಾಗಿಯೂ ಕೆಲವು ಲಿಂಗಗಳು ಸ್ಥಾಪಿತವಾಗಿವೆ. ನಾರಾಯಣ ಮತ್ತು ಪಾರ್ವತಿ ಗುಡಿಗಳಲ್ಲಿರುವ ಮೂಲ ವಿಗ್ರಹಗಳು ಸುಮಾರು 13-14ನೆಯ ಶತಮಾನದವು. ಪಾರ್ವತಿ ಸುಂದರ ಶಿಲ್ಪ. ಇದರಲ್ಲಿ ಹೊಯ್ಸಳ ಶೈಲಿಯ ಛಾಯೆಯನ್ನು ಕಾಣಬಹುದು. ಒಳಗಿನ ಮಹಾದ್ವಾರದ ಮುಂದಿನ ಕೋಣೆಯಲ್ಲಿ ಹೊಯ್ಸಳ ಶೈಲಿಯ ಒಂದು ನೃತ್ಯಗಣಪತಿ ಇದೆ. ಸುಬ್ರಹ್ಮಣ್ಯ ಗುಡಿಯಲ್ಲಿರುವ ಸುಬ್ರಹ್ಮಣ್ಯ, ಹಿಂದಿನ ಪ್ರಾಕಾರ ಸಾಲಿನಲ್ಲಿರುವ ಷಣ್ಮುಖ, ಉಚ್ಚಿಷ್ಟ ಗಣಪತಿ ಇವು ವಿಶಿಷ್ಟವಾದವು. ದೇವಾಲಯದ ಬಹು ಮುಖ್ಯ ಶಿಲ್ಪಗಳೆಂದರೆ ದೇವಾಲಯದ ಬಲಪ್ರಾಕಾರ ಸಾಲಿನಲ್ಲಿರುವ ಶೈವಪುರಾತನರ ವಿಗ್ರಹಗಳು ಮತ್ತು ಎಡಸಾಲಿನಲ್ಲಿರುವ ಲೀಲಾ ಮೂರ್ತಿಗಳು. ಪುರಾತನರು ಸಾಮಾನ್ಯವಾಗಿ 63 ಇಂದು ಪರಿಗಣಿಸಲಾಗಿದ್ದರೂ ಇಲ್ಲಿ 66 ವಿಗ್ರಹಗಳು ತಲಾ ಮೂರರಂತೆ 22 ಗುಂಪುಗಳಲ್ಲಿವೆ. ಸುಮಾರು ಆಳೆತ್ತರದ ಈ ವಿಗ್ರಹಗಳಲ್ಲಿ ಒಂದೊಂದೂ ವೈಶಿಷ್ಟ್ಯಪೂರ್ಣವಾಗಿ ನಿರೂಪಿತವಾಗಿದೆ. 1 ರಿಂದ 1.5 ಮೀ ಎತ್ತರವಿರುವ ಚಂದ್ರಶೇಖರ, ಕಾಲಸಂಹಾರ, ಅಂಧಕಾಸುರಮರ್ದನ, ಲಿಂಗೋದ್ಭವ ಮೊದಲಾದ 25 ಆಗಮೋಕ್ತ ಶಿವಲೀಲಾ ಮೂರ್ತಿಗಳು ಆಗಮದೃಷ್ಟಿಯಿಂದಲೂ ಶಿಲ್ಪ ಸೌಂದರ್ಯದಿಂದಲೂ ಗಮನಾರ್ಹವಾಗಿದೆ. ಈ ಗುಂಪಿನ ದಕ್ಷಿಣಾಮೂರ್ತಿ ಆಕರ್ಷಕ ಕೃತಿ. ಪುರಾತನರ ಮತ್ತು ಲೀಲಾಮೂರ್ತಿಗಳ ವಿಗ್ರಹಗಳ ಸಮೂಹಗಳು ಕರ್ನಾಟಕದಲ್ಲಿ ಕೆಲವು ಸ್ಥಳಗಳಲ್ಲಿ ಮಾತ್ರ ಕಂಡುಬರುತ್ತವೆ. ಅವುಗಳಲ್ಲಿ ನಂಜನಗೂಡಿನವು ದೊಡ್ಡವೂ ಸುಂದರವೂ ಆಗಿವೆ. ಲೀಲಾಮೂರ್ತಿಗಳನ್ನು ಮುಮ್ಮಡಿ ಕೃಷ್ಣರಾಜ ಒಡೆಯರು ಮಾಡಿಸಿದರು ಎಂಬುದಕ್ಕೆ ಐತಿಹಾಸಿಕ ದಾಖಲೆಗಳುಂಟು. ಪುರಾತನರ ವಿಗ್ರಹಗಳೂ ಇದೇ ಕಾಲದವಾಗಿರಬಹುದು. ಉತ್ಸವ ವಿಗ್ರಹದ ಗುಡಿಯ ನೇರ ಎದುರಿನಲ್ಲಿ ಪ್ರಾಕಾರ ಸಾಲಿನಲ್ಲಿ ಪ್ರತ್ಯೇಕಗೊಳಿಸಿರುವ ಒಂದು ಕೋಣೆಯಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರು ಮತ್ತು ಅವರ ನಾಲ್ವರು ಪತ್ನಿಯರ ಆಳೆತ್ತರದ ವಿಗ್ರಹಗಳನ್ನು ಇಡಲಾಗಿದೆ. ಒಡೆಯರ ಕಾಲದ ವ್ಯಕ್ತಿಶಿಲ್ಪಗಳಲ್ಲಿ ಇವು ಅತ್ಯುತ್ತಮವಾದವು. ಬಸವನಕಟ್ಟೆಯ ಪಕ್ಕದಲ್ಲಿರುವ ಸುಮಾರು, 1.2 ಮೀ ಎತ್ತರದ ನಂದಿ ಈ ದೇವಾಲಯದ ಬಹು ಭವ್ಯ ಶಿಲ್ಪ. 1644ರಲ್ಲಿ ದಳವಾಯಿ ವಿಕ್ರಮರಾಯ ಇದನ್ನು ಸ್ಥಾಪಿಸಿದ ಎಂಬುದು ಇದರ ಪೀಠದ ಮೇಲಿನ ಶಾಸನದಿಂದ ತಿಳಿಯುತ್ತದೆ.

ಈ ದೇವಾಲಯದಲ್ಲಿ ಲೋಹವಿಗ್ರಹಗಳೂ ಸಾಕಷ್ಟು ಸಂಖ್ಯೆಯಲ್ಲಿವೆ. ಪಾರ್ವತೀಸಮೇತ ಚಂದ್ರಶೇಖರ, ಸುಬ್ರಹ್ಮಣ್ಯ, ಪಾರ್ವತಿ, ಗಣಪತಿ, ಚಂಡಿಕೇಶ್ವರ, ಶ್ರೀಭೂಸಮೇತ ನಾರಾಯಣ, ತಾಂಡವೇಶ್ವರ ಮೊದಲಾದ, ಲೋಹದ ಉತ್ಸವಮೂರ್ತಿಗಳಿವೆ. ಅಲ್ಲದೆ ಈ ದೇವಾಲಯದಲ್ಲಿ 63 ಪುರಾತನರ ಲೋಹ ವಿಗ್ರಹಗಳಿವೆ. ಇವು 1739-59ರಲ್ಲಿ ಮೈಸೂರಿನ ದಳವಾಯಿಯಾಗಿದ್ದ ಕಳಲೆ ನಂಜರಾಜಯ್ಯ ಮಾಡಿಸಿಕೊಟ್ಟವು.

ದೇವಾಲಯದ ಪ್ರಾಕಾರದ ಹಾರದ ಕೋಷ್ಠಗಳಲ್ಲಿ ಗಾರೆಯಲ್ಲಿ ಮಾಡಿದ 122 ದೇವಮೂರ್ತಿಗಳಿವೆ. ಇವುಗಳಲ್ಲಿ ಅಷ್ಟದಿಕ್ಪಾಲಕರು, ವೀರಭದ್ರ, ನಾರಾಯಣ, 10 ವಿವಿಧ ದಕ್ಷಿಣಾ ಮೂರ್ತಿಗಳು. 7 ಬಗೆಯ ತಾಂಡವೇಶ್ವರ ಮೂರ್ತಿಗಳು, 16 ಬಗೆಯ ಸುಬ್ರಹ್ಮಣ್ಯ ವಿಗ್ರಹಗಳು, 25 ಲೀಲಾಮೂರ್ತಿಗಳು, 32 ಬಗೆಯ ಗಣಪತಿಗಳು, ಸಪ್ತಮಾತೃಕೆಯರು ಮೊದಲಾದವರ ಮೂರ್ತಿಗಳು ಇವೆ. ಇವು ಶಿಲ್ಪಶಾಸ್ತ್ರ ಅಧ್ಯಯನ ದೃಷ್ಟಿಯಿಂದ ಬಹು ಮುಖ್ಯವಾದವು. ಅಲ್ಲದೆ ಮಹಾದ್ವಾರದ ಒಳಗೆ ಅಂಗಳದ ಸುತ್ತಣ ಹಾರದಲ್ಲೂ ಇಂಥವೇ ಮೂರ್ತಿಗಳಿವೆ. ಇವೂ 19ನೆಯ ಶತಮಾನದವು.

ದೇವಸ್ಥಾನದಲ್ಲಿ ಹಿಂದಿನಿಂದಲೂ ಸಂಗ್ರಹವಾಗಿರುವ ಅನೇಕ ವಸ್ತುವಾಹನಗಳುಂಟು. ದೊಡ್ಡ ತೇರು ಮತ್ತು ಪಾರ್ವತಿಯ ತೇರು 1819ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರು ಮಾಡಿಸಿಕೊಟ್ಟವು. ಇವರೂ ಇವರ ಪತ್ನಿಯರೂ ಸಲ್ಲಿಸಿದ ಬೆಳ್ಳಿಕುದುರೆ ವಾಹನ (1830), ಬೆಳ್ಳಿ ಮಂಟಪ ಮತ್ತು ಬೆಳ್ಳಿ ಆನೆ (1834), ಬೆಳ್ಳಿ ಬಸವ (1848), ರುದ್ರಾಕ್ಷಿ ಮಂಟಪ, U್ಪಜರಥ (1847), ಕುದುರೆವಾಹನ (1847), ಕೈಲಾಸ ವಾಹನ (1852), ಶೇಷವಾಹನ ಮೊದಲಾದವು ದೇವಾಲಯದಲ್ಲಿವೆ. ಟಿಪ್ಪು ಸುಲ್ತಾನ್ ಕೊಟ್ಟಿರುವ ಪಂಚರತ್ನಖಚಿತ ಬೆಳ್ಳಿ ಬಟ್ಟಲು ಮತ್ತು ಪಚ್ಚೆಹಾರ, ಶೃಂಗೇರಿಯ ನರಸಿಂಹಭಾರತಿ ಸ್ವಾಮಿಗಳು ಕೊಟ್ಟಿರುವ ಎರಡು ಚಿನ್ನದ ಆಭರಣಗಳು ಮೊದಲಾದ ನೂರಾರು ಆಭರಣಗಳು ಇವೆ.

ಈ ದೇವಾಲಯ ವರ್ಷವಿಡೀ ದೇಶದ ವಿವಿಧ ಭಾಗಗಳಿಂದ ಭಕ್ತರನ್ನು ಆಕರ್ಷಿಸುತ್ತದೆ. ಸೋಮವಾರ ಮತ್ತು ಹುಣ್ಣಿಮೆಯ ದಿನಗಳಲ್ಲಿ ವಿಶೇಷ. ಪ್ರತಿ ಹುಣ್ಣಿಮೆಯಂದು ರಾತ್ರಿ ರಥೋತ್ಸವವುಂಟು. ಅಲ್ಲದೆ ಇಲ್ಲಿ ಎರಡು ವಾರ್ಷಿಕ ಜಾತ್ರೆಗಳಾಗುತ್ತವೆ. ಅಕ್ಟೋಬರ್-ನವಂಬರ್‍ನಲ್ಲಿ ನಡೆಯುವುದು ತ್ರಿರಥ (ಚಿಕ್ಕ ಜಾತ್ರೆ); ಮಾರ್ಚ್-ಏಪ್ರಿಲ್‍ನಲ್ಲಿ ಜರುಗುವುದು ಪಂಚ ರಥ (ದೊಡ್ಡ ಜಾತ್ರೆ).

ಯಾತ್ರಾರ್ಥಿಗಳ ಉಪಯೋಗಕ್ಕಾಗಿ ಇಲ್ಲಿ ಅನೇಕ ಛತ್ರಗಳಿವೆ. ನಂಜನಗೂಡಿನ ನಂಜುಂಡೇಶ್ವರನನ್ನು ಅನೇಕ ಜನ ಕುಲದೈವವೆಂದು ಪರಿಗಣಿಸುತ್ತಾರೆ. ಈ ಸುತ್ತಿನ ಜನಪದದಲ್ಲಿ ನಂಜುಂಡನಿಗೆ ವಿಶೇಷ ಸ್ಥಾನವುಂಟು.

 

LEAVE A REPLY

Please enter your comment!
Please enter your name here