ನಾಲ್ಕು ಬಗೆಯ ಚಕ್ಕುಲಿ ಮಾಡುವ ವಿಧಾನಗಳು ಇಲ್ಲಿವೆ. ನಿಮಗೆ ಇಷ್ಟವಾದದ್ದನ್ನು ಮಾಡಿ, ಹಂಚಿ ತಿಂದು ಖುಷಿಪಡಿ

ಹೆಸರುಬೇಳೆ ಚಕ್ಕುಲಿ

ಬೇಕಾಗುವ ಸಾಮಗ್ರಿ : ಬೇಯಿಸಿದ ಹೆಸರುಬೇಳೆ ಒಂದು ಕಪ್‌, ತೊಳೆದ ಅಕ್ಕಿಹಿಟ್ಟು ಒಂದು ಕಪ್‌, ಜೀರಿಗೆ, ಉಪ್ಪು, ಕರಿಯಲು ಎಣ್ಣೆ.

ಮಾಡುವ ವಿಧಾನ : ಹೆಸರುಬೇಳೆಯನ್ನು ನೀರು ಹಾಕಿ ಮೆತ್ತಗೆ ಬೇಯಿಸಿಕೊಳ್ಳಿ. ಬೇಳೆಯ ನೀರು ಬಸಿದು ನುಣ್ಣಗೆ ನಾದಿಕೊಳ್ಳಿ. ಉಪ್ಪು, ಜೀರಿಗೆ ಸೇರಿಸಿ ಕಲಸಿ. ಚಕ್ಕುಲಿ ಒರಳಿಗೆ ಹಿಟ್ಟು ತುಂಬಿ ಕಾದ ಎಣ್ಣೆಯಲ್ಲಿ ಚಕ್ಕುಲಿ ಕರಿಯಿರಿ. ಬಾಯಲ್ಲಿ ಹಾಕಿದರೆ ಕರಗುವಂಥ ರುಚಿಯಾದ ಚಕ್ಕುಲಿ ತಯಾರ್‌.

ಮೈದಾಹಿಟ್ಟಿನ ಚಕ್ಕುಲಿ

ಬೇಕಾಗುವ ಸಾಮಗ್ರಿ : ಮೈದಾಹಿಟ್ಟು ಒಂದು ಲೋಟ, ಎಳ್ಳು ಎರಡು ಚಮಚ (ಬಿಳಿ), ಉಪ್ಪು, ಕರಿಯಲು ಎಣ್ಣೆ.

ಮಾಡುವ ವಿಧಾನ : ಮೈದಾಹಿಟ್ಟನ್ನು ಒಂದು ಬಟ್ಟೆಯಲ್ಲಿ ಕಟ್ಟಿ ತಟ್ಟೆಯ ಮೇಲೆ ಇಟ್ಟು ಆವಿಯಲ್ಲಿ ಮುಕ್ಕಾಲುಗಂಟೆ ಬೇಯಿಸಿ. ಇದನ್ನು ತೆಗೆದು ಉಂಡೆಯಂತಾಗಿರುವ ಮೈದಾಹಿಟ್ಟನ್ನು ಪುಡಿಮಾಡಿ. ಉಪ್ಪು , ಎಳ್ಳು ಸೇರಿಸಿ. ನೀರು ಹಾಕಿ ಹಿಟ್ಟನ್ನು ಕಲಸಿ ಚಕ್ಕುಲಿ ಒರಳಿಗೆ ತುಂಬಿ ಕಾದ ಎಣ್ಣೆಯಲ್ಲಿ ಹದವಾಗಿ ಕರಿದು ತೆಗೆಯಿರಿ. ಮೈದಾ ಚಕ್ಕುಲಿ ಹೆಚ್ಚು ರುಚಿ.

ಉದ್ದಿನಬೇಳೆ ಚಕ್ಕುಲಿ

ಬೇಕಾಗುವ ಸಾಮಗ್ರಿ : ತೊಳೆದ ಅಕ್ಕಿ ಹಿಟ್ಟು ಒಂದು ಲೋಟ. ಉದ್ದಿನಬೇಳೆ ಹಿಟ್ಟು ಕಾಲು ಲೋಟ. ಬಿಳಿ ಎಳ್ಳು ಎರಡು ಚಮಚ, ಡಾಲ್ಡ ಅಥವಾ ತುಪ್ಪ ಎರಡು ಚಮಚ. ಕರಿಯಲು ಎಣ್ಣೆ, ಉಪ್ಪು.

ಮಾಡುವ ವಿಧಾನ : ಅಕ್ಕಿಯನ್ನು 6 ಬಾರಿ ನೀರಿನಲ್ಲಿ ತೊಳೆದು ಬಸಿದು ನೆರಳಿನಲ್ಲಿ ಒಣಗಿಸಿ ಹಿಟ್ಟು ಮಾಡಿಸಿದ್ದು ಒಂದು ಲೋಟ. ಉದ್ದಿನಬೇಳೆಯನ್ನು ಒಂದು ಸಾರಿ ನೀರಿನಲ್ಲಿ ತೊಳೆದು ಕೂಡಲೇ ಸ್ವಲ್ಪ ಸ್ವಲ್ಪವಾಗಿ ಹಾಕಿ ಸಂಪಿಗೆ ಬಣ್ಣಕ್ಕೆ ಹುರಿದು ಪುಡಿ ಮಾಡಿದ್ದು ಕಾಲು ಲೋಟ ಅಕ್ಕಿಹಿಟ್ಟಿಗೆ ಸೇರಿಸಿ. ತುಪ್ಪ, ಉಪ್ಪು, ಬಿಳಿ ಎಳ್ಳು ಸೇರಿಸಿ ಹಿಟ್ಟನ್ನು ಗಂಟಿಲ್ಲದೆ ಚೆನ್ನಾಗಿ ಕೂಡಿಸಿ. ನೀರು ಹಾಕಿ ಕಲಸಿ ಚಕ್ಕುಲಿ ಒರಳಿನಲ್ಲಿ ತುಂಬಿ ಕಾದ ಎಣ್ಣೆಯಲ್ಲಿ ಚಕ್ಕುಲಿ ಕರಿದು ತೆಗೆಯಿರಿ. ಇದು ರುಚಿ. ಇದನ್ನು ಮೊಸರಿನಲ್ಲಿ ಕಲಸಿದ ಹುರಿಗಡಲೇ ಚಟ್ನಿ ಪುಡಿಯ ಜತೆ ತಿನ್ನಲು ರುಚಿ.

ಮಸಾಲೆ ಚಕ್ಕುಲಿ

ಬೇಕಾಗುವ ಸಾಮಗ್ರಿ : ಮೇಲೆ ಹೇಳಿದ ರೀತಿಯಲ್ಲಿ ಚಕ್ಕುಲಿ ಹಿಟ್ಟು ರೆಡಿ ಮಾಡಿಕೊಂಡದ್ದು ಒಂದು ಲೋಟ. ಪುದೀನಾ ಎರಡು ಚಮಚ. ಜೀರಿಗೆ, ಉಪ್ಪು, ಕೊತ್ತುಂಬರಿ ಸೊಪ್ಪು, ಚಕ್ಕೆ ತುಂಡು, ಹಸಿಮೆಣಸಿನಕಾಯಿ ನಾಲ್ಕು ತೊಟ್ಟು, ನಿಂಬೆರಸ, ಕರಿಯಲು ಎಣ್ಣೆ.

ಮಾಡುವ ವಿಧಾನ : ಚಕ್ಕುಲಿ ಹಿಟ್ಟಿಗೆ ಉಳಿದ ಮಸಾಲೆ ಪದಾರ್ಥಗಳನ್ನು ಸೇರಿಸಿ ನುಣ್ಣಗೆ ಚಟ್ನಿಯಂತೆ ರುಬ್ಬಿಕೊಳ್ಳಿ. ಹಿಟ್ಟಿಗೆ ತುಪ್ಪ ಸೇರಿಸಿ ಕೂಡಿಸಿಕೊಳ್ಳಿ. ರುಬ್ಬಿದ ಮಸಾಲೆ ಸೇರಿಸಿ ಗಂಟಿಲ್ಲದಂತೆ ಮಾಡಿಕೊಳ್ಳಿ. ಬೇಕಿದ್ದರೆ ನೀರು ಸೇರಿಸಿ ಕಲಸಿ. ಚಕ್ಕುಲಿ ಒರಳಿನಲ್ಲಿ ತುಂಬಿ ಕಾದ ಎಣ್ಣೆಯಲ್ಲಿ ಚಕ್ಕುಲಿ ಕರಿದು ತೆಗೆಯಿರಿ. ಘಮಘಮಿಸುವ ಮಸಾಲೆ ಚಕ್ಕುಲಿ ತಿನ್ನಲು ಬಲು ರುಚಿ.

LEAVE A REPLY

Please enter your comment!
Please enter your name here