ಇಂದು ವರನಟ,ಕನ್ನಡದ ಕಣ್ಮಣಿ ಡಾ|| ರಾಜ್‌ಕುಮಾರ್ ರವರ ಹುಟ್ಟುಹಬ್ಬ.ರಾಜ್ ಕುಮಾರ್ ನೆನೆಸಿಕೊಂಡರೆ ಎಲ್ಲಿಲ್ಲದ ಸಂತೋಷ,ಒಂದು ರೀತಿಯ ಆಶಾಭಾವ,ತೆರೆಯ ಮೇಲೆ ಅವರನ್ನು ಕಂಡರಂತೂ ನಮ್ಮೆಲ್ಲರಿಗೂ ಎಲ್ಲಿಲ್ಲದ ಸಂತೃಪ್ತಿ,ಅಭಿಮಾನ,ಖುಷಿಯ ಜೊತೆಗೆ ಕನ್ನಡಿಗರ ಆತ್ಮಾಭಿಮಾನ ಹೆಚ್ಚುತ್ತೆ.

ರಾಜ್ ಕುಮಾರ್ 

ಬಹುಶಃ ನಮ್ಮ ಈಗಿನ ತಲೆಮಾರಿನ , ನಮ್ಮ ಹಿಂದಿನ ತಲೆಮಾರಿನ , ಹಾಗೂ ಭಾಗಶಃ ನಮ್ಮ ಮುಂದಿನ ತಲೆಮಾರಿನವರು ಬಹುತೇಕ ಕನ್ನಡಿಗರ ಜೀವನದಲ್ಲಿ ಒಂದಲ್ಲ ಒಂದು ರೀತಿ ಪ್ರಭಾವ ಬೀರಿದ ಹೆಸರು . ರಾಜ್‌ಕುಮಾರ್ ಅವರು  ನಡೆದು ಬಂದ ದಾರಿ , ಅವರು ನಟಿಸಿದ ಚಿತ್ರಗಳು , ಆ ಚಿತ್ರಗಳಲ್ಲಿ ಅವರು ಮಾಡುತಿದ್ದ ಪಾತ್ರ, ಆ ಪಾತ್ರಗಳ ಮತ್ತು ಚಿತ್ರಗಳ ಮೂಲಕ ಅವರು ನೀಡುತಿದ್ದ ಸಂದೇಶ ಅಮೋಘ ಹಾಗೂ ಪ್ರತಿಯೊಬ್ಬರ ಜೀವನಕ್ಕೂ ಅತ್ಯಮೂಲ್ಯ .

ರಾಜ್‌ಕುಮಾರ್ ಅವರ  ಪ್ರಕಾರ ಜೀವನ :

“ಜೀವನವನ್ನ ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ರೂಪಿಸಿಕೊಳ್ಳುವುದಕ್ಕೆ ಸ್ವಾತಂತ್ರ್ಯವಿದೆ . ಇದು ಸರಿ , ಇದು ತಪ್ಪು ಅಂತ ಹೇಳೋದು ಬಹಳ ಕಷ್ಟದ ಕೆಲಸ ” . ರಾಜ್‌ಕುಮಾರ್ ಅವರು  ಶ್ರೀ ರಾಮಚಂದ್ರನ ಜೀವನವನ್ನ ಇಷ್ಟ ಪಡುತ್ತಿದ್ದರಂತೆ ಶ್ರೀ ರಾಮಚಂದ್ರನು ಜೀವನದಲ್ಲಿ ಎಷ್ಟೇ ಕಷ್ಟ ಬಂದರು ಸಹ ಬೇರೆಯವರಿಗೆ ಪ್ರೀತಿಯನ್ನು ನೀಡುತಿದ್ದ , ಆದ್ದರಿಂದ ಜೀವನದಲ್ಲಿ ಎಷ್ಟೇ ಕಷ್ಟ ಬಂದರು ನಾವು ಇನ್ನೊಬ್ಬರಿಗೆ ಪ್ರೀತಿಯನ್ನು ನೀಡುವುದರಲ್ಲಿ ನಿಜವಾದ ಜೀವನವಿದೆ ಎಂದು ನಂಬಿದ್ದರು.

ರಾಜ್‌ಕುಮಾರ್ ಅವರ ದೃಷ್ಟಿಯಲ್ಲಿ ಶ್ರದ್ಧೆ :

ಶ್ರದ್ಧೆ ಅನ್ನೋ ಪದ ಆಕಾಶದಷ್ಟೆ ಅನಂತವಾದದ್ದು.ಯಾವುದೇ ಕೆಲಸವಿರಲಿ ಅದು ದೊಡ್ಡದಾಗಲಿ , ಸಣ್ಣದಾಗಲಿ, ನಾವು ಆ ಕೆಲಸದಲ್ಲಿ ನಮಗೆ ಎಷ್ಟು ಲಾಭವಿದೆ, ನಷ್ಟವಿದೆ ಇದ್ಯಾವುದನ್ನೂ ಯೋಚಿಸದೇ ಒಂದೇ ಮನಸ್ಸಿನಿಂದ , ಶ್ರದ್ಧೆಯಿಂದ ಆ ಕೆಲಸವನ್ನು ಮಾಡಿದರೆ ನಮಗೆ ಒಳ್ಳೆಯ ಫಲ ಸಿಕ್ಕೇ ಸಿಗುತ್ತದೆ.

ರಾಜ್‌ಕುಮಾರ್ ಅವರ ದೃಷ್ಟಿಯಲ್ಲಿ ಧ್ಯಾನ :

ನಾವುಮಾಡುವ ಪ್ರತಿ ಕೆಲಸವನ್ನು ಧ್ಯಾನವನ್ನಾಗಿ ಪರಿವರ್ತಿಸಬಹುದು . ” ನಾವು ಮಾಡುವ ಅಭಿನಯದಲ್ಲಿ ಪೂರ್ತಿಯಾಗಿ ತಲ್ಲೀನನಾಗಿ ನಾನು ಧ್ಯಾನವನ್ನು ಕಂಡುಕೊಳ್ಳುತ್ತೇನೆ “.

ರಾಜ್‌ಕುಮಾರ್ ಅವರ ದೃಷ್ಟಿಯಲ್ಲಿ ದೇವರು :

” ನನ್ನ ಅಭಿಮಾನಿಗಳೇ ನನ್ನ ದೇವರು, ಎಲ್ಲ ಅಭಿಮಾನಿಗಳು ನನಗೆ ನೀಡಿರುವ ಆಪಾರವಾದ ಪ್ರೀತಿಯೇ ನನಗೆ ದೇವರ ರೂಪದಲ್ಲಿ ಕಾಣಿಸುತ್ತೆ. ಪ್ರೀತಿ ಅನ್ನೋದು ದೇವರ ಇನ್ನೂಂದು ರೂಪ”.

ರಾಜ್‌ಕುಮಾರ್ ಅವರ ದೃಷ್ಟಿಯಲ್ಲಿ ಯೋಗ :

ಮನುಷ್ಯ ತನ್ನನ್ನು ತಾನು ಶುದ್ಧಿಕರಿಸಿಕೊಳ್ಳೋಕೆ , ತನ್ನ ತಪ್ಪುಗಳನ್ನು ತಿದ್ದಿಕೊಳ್ಳೋಕೆ, ಮನಸ್ಸು ಮತ್ತು ಆತ್ಮದ ಪರಿಪೂರ್ಣತೆಯನ್ನು ಕಂಡುಕೊಳ್ಳೋಕೆ ಯೋಗ ಅಗತ್ಯ , ಮತ್ತು ಇವೆಲ್ಲವನ್ನೂ ಸೇರಿಸಿದರೆ ಯೋಗ ಆಗುತ್ತೆ.

ರಾಜ್‌ಕುಮಾರ್ ಅವರು  ಎಷ್ಟೆಲ್ಲ ಜನರ ಪ್ರೀತಿಯನ್ನ ಗಳಿಸಿದ್ರು , ಎಷ್ಟೇ ಅತ್ಯಂತ ಹೆಚ್ಚಿನ ಯಶಸ್ಸನ್ನ ಗಳಿಸಿದ್ರು ಅವರು ಅತ್ಯಂತ ಸರಳ ಜೀವಿಯಾಗಿದ್ರು , ಆಧ್ಯಾತ್ಮದಲ್ಲಿ ಸಾಕಷ್ಟು ಜ್ಞಾನವನ್ನ ಪಡೆದುಕೊಂಡಿದ್ರು , ಮತ್ತು ಯಾವುದೇ ಬೇಧ , ಭಾವ ಇಲ್ಲದೆ ಎಲ್ಲರನ್ನೂ ಸಮಾನವಾದ ಹೃದಯಪೂರ್ವಕ ಪ್ರೀತಿಯಿಂದ ಕಾಣ್ತಿದ್ರು. ಅವರು ನಡೆದು ಬಂದ ದಾರಿ ನಿಜಕ್ಕೂ ನಮ್ಮೆಲರಿಗೂ ಆದರ್ಶ. ಅವರ ಸರಳತೆ, ಸಜ್ಜನಿಕೆಯೇ ನಮ್ಮೆಲರಿಗೂ ದಾರಿದೀಪವಾಗಿದೆ . ನಾವು ಯಾವುದೇ ರಂಗದಲ್ಲಿರಲಿ ರಾಜ್‌ಕುಮಾರ್ರವರ ಜೀವನ ಅವರು ನಡೆದು ಬಂದ ದಾರಿ ನಮ್ಮ ಮುಂದಿನ ಎಲ್ಲ ಕನಸುಗಳಿಗೆ ಆಶಾಕಿರಣವಾಗಿದೆ. ಒಟ್ಟಾರೆ ಸರಳತೆ ಮತ್ತು ಸಜ್ಜನಿಕೆಯ ಮೂರ್ತರೂಪ ಡಾ|| ರಾಜ್‌ಕುಮಾರ್ ಎಂದು ಹೇಳಬಹುದು .

ಅವರ ಹುಟ್ಟಿದ ಹಬ್ಬದಂದು ಅವರನ್ನು ನೆನೆಯುತ್ತಾ ನಾವು ಡಾ|| ರಾಜ್‌ಕುಮಾರ್ ನಡೆದು ಬಂದ ದಾರಿಯನ್ನು ನಮ್ಮ ಜೀವನಕ್ಕೆ ಮಾದರಿಯನ್ನಾಗಿಸಿ ಜೀವನವನ್ನು ನಡೆಸೋಣ 

LEAVE A REPLY

Please enter your comment!
Please enter your name here