ಮಸ್ಸೌರಿಯ ಸಮೀಪದ ಮಾಲ್ಸಿ ಎಂಬ ಊರಿನಲ್ಲಿ ಇನ್ನೂ ಪೂರ್ಣವಾಗದ ಮಕ್ಕಳ ಉದ್ಯಾನವೊಂದಿದೆ. ಈ ಪಾರ್ಕಿನ ನಿರ್ಮಾಣ ಮಾಡಿರುವುದು 80 ವರ್ಷದ ಏರೊನ್ ಎಂಬ ವ್ಯಕ್ತಿ. ಮೂಲತಃ ಪ್ಲಾಸ್ಟಿಕ್ ಸರ್ಜನ್ ಆದ ಇವರು ಇಲ್ಲಿ ವಿವಿಧ ಬಗೆಯ ಕೀಟಗಳು, ಹೆಬ್ಬಾವು, ಹಾವಿನ ಶರೀರದ ಭಾಗಗಳು, ಮರಗಳು ಎಲ್ಲವನ್ನೂ ಹೊಂದಿದ್ದಾರೆ. ಇದಕ್ಕಿಂತ ಹೊರತಾಗಿ ಇವರ ಇನ್ನೊಂದು ಸೇವೆಯಿದೆ. ಅದೇ, ಸುಟ್ಟ ಗಾಯಗಳಿಗೆ ಇವರು ನೀಡುವ ಚಿಕಿತ್ಸೆ. ಹಿಮಾಲಯ ಪ್ರದೇಶದ ಬಹಳಷ್ಟು ಮಂದಿ ಕರಡಿ, ಹುಲಿ ಮೊದಲಾದ ಕಾಡು ಪಾಣಿಗಳಿಂದÀ ಆಕ್ರಮಣಕ್ಕೊಳಗಾದವರೂ ಇಲ್ಲಿಗೆ ಬರುತ್ತಾರೆ. ಕಡು ಬಡವರಿಗೆ ಉಚಿತ ಚಿಕಿತ್ಸೆಯನ್ನೂ ನೀಡುತ್ತಾರೆ. ಸ್ಥಳೀಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯವರೂ ಇವರಿಂದ ಸಹಾಯ ಪಡೆದುಕೊಳ್ಳುತ್ತಾರೆ.

ವರ್ಷಕ್ಕೆ ಸುಮಾರು 500 ಮಂದಿ ಸುಟ್ಟ ಗಾಯವಾದ ರೋಗಿಗಳನ್ನು ಉಪಚರಿಸುವ 80ರ ಪ್ರಾಯದ ಡಾಕ್ಟರ್

ಆಶ್ಚರ್ಯಕರ ಸಂಗತಿಯೆಂದರೆ ಇಲ್ಲಿಗೆ ಚಿಕಿತ್ಸೆಗೆ ಬರುವ ಸುಟ್ಟ ಗಾಯದ ರೋಗಿಗಳ ಸಂಖ್ಯೆ ಹೆಚ್ಚು. ಕಾರಣ ಇಷ್ಟೇ- ಹಸುಗೂಸು ಅಥವಾ ಸಣ್ಣ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಪೋಷಕರು ಕೆಲಸಕ್ಕೋ, ಇನ್ನಾವುದೋ ಕಾರಣಕ್ಕೆ ಹೋದಾಗ, ಹಿಮಾಲಯ ಪ್ರದೇಶದಲ್ಲಿರುವ ಈ ಊರಿನಲ್ಲಿ ಚಳಿಯಿಂದ ರಕ್ಷಿಸಿಕೊಳ್ಳಲು ಒಲೆಯಲ್ಲಿ ಉರಿಯನ್ನು ಉಳಿಸಿ ಹೋಗಿರುತ್ತಾರೆ. ಹುಲ್ಲು ಹಾಸಿನ ಈ ಮನೆಗಳಲ್ಲಿ ಉಳಿಯುವ ಮಕ್ಕಳು ಅಥವಾ ವೃದ್ಧರು ಬೆಂಕಿ ಅವಘಡಗಳಿಗೆ ಹೆಚ್ಚು ಸಿಲುಕಿಕೊಳ್ಳುತ್ತಾರೆ. ಇದರ ಜೊತೆಗೆ, ಕಾಡುಪ್ರಾಣಿಗಳ ದಾಳಿಗೊಳಗಾಗಿ ವಿವಿಧ ಅಂಗಗಳನ್ನು ಕಳೆದುಕೊಂಡವರೂ ಇಲ್ಲಿಗೆ ಬರುತ್ತಾರೆ.

ಕಳೆದ 11 ವರ್ಷಗಳಿಂದ, ಸುಟ್ಟ ಗಾಯದ ರೋಗಿಗಳಿಗೆ, 15-16 ಮಂದಿ ಅಮೆರಿಕದ ವೈದ್ಯರ ತಂಡದೊಂದಿಗೆ ಇವರು ವರ್ಷಕ್ಕೆರಡು ಬಾರಿ ಎರಡು ವಾರಗಳ ಕಾಲದ ಉಚಿತ ಶಿಬಿರವನ್ನೂ ಆಯೋಜಿಸುತ್ತಾರೆ. ಈ ಸಮಯದಲ್ಲಿ ಇವರು ದಿನವೊಂದಕ್ಕೆ 10 ಶಸ್ತ್ರ ಚಿಕಿತ್ಸೆಗಳನ್ನು ಮಾಡಿದ್ದೂ ಇದೆ. ಈ ವೈದ್ಯರೇ ಎಲ್ಲಾ ಖರ್ಚುಗಳನ್ನು ನೋಡಿಕೊಳ್ಳುತ್ತಾರೆ.

ಸುಮಾರು 350ರಷ್ಟು ಇತರೆ ಶಸ್ತ್ರ ಚಿಕಿತ್ಸೆಗಳೊಂದಿಗೆ ವರ್ಷಕ್ಕೆ ಸುಮಾರು 500 ಶಸ್ತ್ರ ಚಿಕಿತ್ಸೆಗಳನ್ನು ತನ್ನ ಸಹಾಯಕನ ನೆರವಿನೊಂದಿಗೆ ಇವರು ಮಾಡುತ್ತಾರೆ. ಕೆಲವೊಮ್ಮೆ ಒಬ್ಬನೇ ರೋಗಿಗೆ ಚಿಕಿತ್ಸಾ ಕ್ರಮಕ್ಕನುಗುಣವಾಗಿ 10 ಶಸ್ತ್ರ ಚಿಕಿತ್ಸೆಗಳನ್ನು ಮಾಡುವ ಸಂದರ್ಭವೂ ಇರುತ್ತದೆ. ಹೆಚ್ಚಿನ ಚಿಕಿತ್ಸೆಗಳ ಮುಖದ ಅಚ್ಚುಗಳು ಇವರ ಬಳಿ ಇವೆ. ಹೀಗೇ ಹಿಮಾಲಯದ ವಿವಿಧ ಪ್ರದೇಶಗಳಿಂದ 10000 ರೋಗಿಗಳು ಉಚಿತ ಚಿಕಿತ್ಸೆಗೆ ಕಾಯುತ್ತಿದ್ದಾರಂತೆ.

ಮುಖದಲ್ಲಿ ಯಾವ ಅವಯವಗಳೂ ಇಲ್ಲದ, ಕೇವಲ ಎರಡು ದೊಡ್ಡ ಬಿಳಿಯ ಕಣ್ಣುಗುಡ್ಡೆಗಳನ್ನು ಹೊಂದಿರುವ ವ್ಯಕ್ತಿಯೊಬ್ಬರು ತನ್ನ ಹಣೆಬರಹವನ್ನು ಬದಲಿಸಿಕೊಳ್ಳಲು ಇವರಲ್ಲಿಗೆ ಬಂದಿದ್ದಾನೆ. ಬೇರೆಲ್ಲಿಯೂ ಉಳಿದುಕೊಳ್ಳಲು ಅಸಾಧ್ಯವಾದವರಿಗೆ ಉಳಿಯುವ ವ್ಯವಸ್ಥೆಯೂ ಇಲ್ಲಿದೆ. ಭವಿಷ್ಯತ್ತನ್ನು ಬದಲಾಯಿಸಿಕೊಂಡು ಎಲ್ಲರಂತೆ ಬದುಕುವ ಕನಸು ಕಾಣುತ್ತಿರುವ ಮಕ್ಕಳು ಇಲ್ಲಿದ್ದಾರೆ.

ಲೇಖನ : ಅಶ್ವಿನಿ ಪ್ರಕಾಶ್ 

LEAVE A REPLY

Please enter your comment!
Please enter your name here