ಕರ್ನಾಟಕದ ಮುರುಡೇಶ್ವರದಲ್ಲಿರುವ ಶಿವನ ದೇವಾಲಯವು ಭಾರತದ ಅತಿಮುಖ್ಯ ಶಿವಾಲಯಗಳಲ್ಲಿ ಒಂದು. ಪ್ರವಾಸೋದ್ಯಮದ ವಿಷಯದಲ್ಲಿ ಕರ್ನಾಟಕವು ಕಡೆಗಣಿಸಲ್ಪಟ್ಟ ರಾಜ್ಯವೆಂದೇ ಹೇಳಬಹುದು. ಭಾರತದ ನೈರುತ್ಯಕ್ಕಿರುವ ಈ ರಾಜ್ಯದಲ್ಲಿ ಪಶ್ಚಿಮ ಘಟ್ಟಗಳು, ಅರಬ್ಬಿ ಸಮುದ್ರದಿಂದ ಸುತ್ತುವರೆದ ಕರಾವಳಿ, ಸಮುದ್ರ ತೀರಗಳು ಎಲ್ಲಾ ಇವೆ. ಜೊತೆಗೆ ವಾಸ್ತುಶೈಲಿ, ಧಾರ್ಮಿಕ ಪ್ರಾಮುಖ್ಯತೆ, ಸ್ಥಳದ ಇತಿಹಾಸಗಳಿಂದ ಇಲ್ಲಿನ ಬಹುತೇಕ ದೇವಾಲಯಗಳು ಆಕರ್ಷಣೀಯವಾಗಿ ತೋರುತ್ತವೆ. ಇಂತಹ ದೇವಾಲಯಗಳಲ್ಲಿ ಮುರುಡೇಶ್ವರದ ಶಿವನ ದೇವಾಲಯವೂ ಒಂದು.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿನ ಕಂದುಕ ಬೆಟ್ಟದ ಮೇಲೆ ಕಣ್ಮನ ಸೆಳೆಯುವ ಈ ಶಿವನ ಪ್ರತಿಮೆಯಿದೆ. ದೇವಾಲಯದ ಮೂರೂ ಕಡೆಗಳಲ್ಲಿಯೂ ಅರಬ್ಬೀ ಸಮುದ್ರ ಸುತ್ತುವರೆದಿದೆ. ಶಿವನ ವಿವಿಧ ರೂಪಗಳಲ್ಲಿ ಇಲ್ಲಿಯದೂ ಒಂದು. ಸುಮಾರು 123 ಅಡಿಗಳಷ್ಟು ಎತ್ತರವಿರುವ ಈ ಪ್ರತಿಮೆಯು ಬಹಳ ದೂರದಿಂದಲೇ ಗೋಚರಿಸುತ್ತದೆ. ಸೂರ್ಯೋದಯದ ಕಿರಣಗಳು ಶಿವನ ಮೇಲೆ ಬಿದ್ದು ಹೊಳೆಯುವಂತಾಗಲು ಅಂದಾಜಿಸಿಯೇ ಈ ಪ್ರತಿಮೆಯನ್ನು ನಿರ್ಮಿಸಲಾಗಿದೆ.

ಶಿವನ ಪ್ರತಿಮೆಯ ಪಕ್ಕದಲ್ಲಿರುವ ದೇವಾಲಯದ ಸಂಕೀರ್ಣದಲ್ಲಿ 20 ಮಹಡಿಗಳ ಗೋಪುರವಿದ್ದು, ಭವ್ಯವಾದ ಈ ಪ್ರತಿಮೆಯನ್ನು ನೋಡಲು ಈ ಕಟ್ಟಡದ ತುದಿಯವರೆಗೆ ಇಲವೇಟರ್ ವ್ಯವಸ್ಥೆಯೂ ಇದೆ. ಬೆಟ್ಟದ ಕೆಳಗೆ ಒಂದು ರಾಮೇಶ್ವರ ಲಿಂಗ ಇದ್ದರೂ ಅದು ಜನರು ಹೋಗಿ ಕಾಣದಂತಹ ರೀತಿಯಲ್ಲಿ ಇಡಲಾಗಿದೆ.
ಪ್ರವಾಸ ಹೋಗುವ ವಾಡಿಕೆಯಿರುವವರು ಮತ್ತು ಭಕ್ತರು ಸಂದರ್ಶಿಸಲೇಬೇಕಾದ ಈ ಸ್ಥಳವು ತನ್ನ ಅಮೋಘ ಸೌಂದರ್ಯ ಮತ್ತು ಸುತ್ತಲ ನೋಟಗಳಿಂದಾಗಿ ನಿಮ್ಮ ನೆನಪಿನಲ್ಲಿ ಸದಾ ಉಳಿಯುವುದು ಖಂಡಿತ.

ಲೇಖನ: ಅಶ್ವಿನಿ ಪ್ರಕಾಶ್ 

LEAVE A REPLY

Please enter your comment!
Please enter your name here