ಹಿಂಧೂ ಸಂಪ್ರದಾಯದ ಪ್ರಕಾರ ಮದುವೆಯಾದ ಜೋಡಿಗೆ ಪರೋಹಿತರು ಅರುಂಧತಿ ನಕ್ಷತ್ರ ತೋರಿಸುವ ರೂಢಿಯಿದೆ, ಅದು ಬೆಳಗ್ಗೆ! ನಿಮಗೆಲ್ಲರಿಗೂ ಆಶ್ಚರ್ಯವಾಗಬಹುದು ಯಾಕೆ ಹೀಗೆ ಅರುಂಧತಿ ನಕ್ಷತ್ರವನ್ನೇ ತೋರಿಸುತ್ತಾರೆ ಅಂತ..! ಆದರೆ ಅದರ ಹಿಂದೆ ಒಂದು ಕೌತುಕ ಕಥೆ ಇದೆ, ಏನದು?

ಪುರಾಣಗಳಲ್ಲಿ ವಸಿಷ್ಟ ಅರುಂಧತಿಯರ ಹೇಗೆ ಅವರು ಗಂಡ ಹೆಂಡತಿ ಒಬ್ಬರಿಗೊಬ್ಬರು ಇಂಬಾಗಿದ್ದರು, ಎಂತಹ ಅನುರೂಪ ದಾಂಪತ್ಯ ಅವರದ್ದು ಅನ್ನುವ ಬಗ್ಗೆ ಹೇಳಿದ್ದಾರಂತೆ. ಹಾಗಾಗಿ, ಆಕಾಶದಲ್ಲಿ ಇರುವ ಸಪ್ತರ್ಷಿ ಮಂಡಲದಲ್ಲಿ ಏಳು ಋಷಿಗಳನ್ನು ಗುರ್ತಿಸುವುದಿದ್ದರೂ, ಅವರಲ್ಲಿ ವಸಿಷ್ಠರಿಗೆ ಮಾತ್ರ ಜೊತೆಯಲ್ಲೇ ಪತ್ನಿ ಅರುಂಧತಿಯೂ ಇದ್ದಾಳೆ. ಇಂತಹ ಪತಿಪತ್ನಿಯರನ್ನು ಆಗಸದಲ್ಲಿ ನೋಡಿ, ಮದುವೆಯಾಗುತ್ತಿರುವ ವಧುವರರೂ ಹಾಗೇ ಬಾಳಲಿ ಅನ್ನುವ ಹಾರೈಕೆಯೇ ಇದರ ಮೂಲ ಉದ್ದೇಶ.

ತೋರಿಸುವ ಪುರೋಹಿತರಲ್ಲಿ ಅರ್ದ ಜನಕ್ಕೆ ಅರುಂಧತಿ ಆಕಾಶದಲ್ಲಿ ಎಲ್ಲಿದೆ ಅಂತ ಗೊತ್ತಿರೋದಿಲ್ಲ. ಬೆಪ್ಪು ಬೆಪ್ಪಾಗಿ ನೋಡುವ ಮದುಮಕ್ಕಳಲ್ಲಿ ಮುಕ್ಕಾಲು ಪಾಲು ಜನಕ್ಕೆ ವಸಿಷ್ಠನೂ ಗೊತ್ತಿರೋದಿಲ್ಲ ಅರುಂಧತಿಯೂ ಗೊತ್ತಿರೋದಿಲ್ಲ. ಅಷ್ಟೇ ಅಲ್ಲ, ಬೇಕಾಗೂ ಇರೋದಿಲ್ಲ!

ಅರುಂಧತಿ ನಕ್ಷತ್ರವನ್ನು ಎಲ್ಲರೂ ಬೆಳಗ್ಗೆ ಸುಮ್ಮನೆ ನೋಡಿ ನಕ್ಕಿರುತ್ತಾರೆ ಆದರೆ ನಾವು ಈಗ ಅರುಂಧತಿಯ ದರ್ಶನ ಮಾಡಿಸ್ತೀವಿ ನೋಡಿ:

ಆಕಾಶದಲ್ಲಿ ಅಕ್ಕ ಪಕ್ಕದಲ್ಲಿ ಕಾಣುವ ನಕ್ಷತ್ರಗಳು ನಿಜವಾಗಿ ಒಂದಕ್ಕೊಂದು ಬಹಳ ದೂರ (ನೂರಾರು ಸಾವಿರಾರು ಬೆಳಕಿನವರ್ಷದಷ್ಟೂ) ಇರಬಹುದು. ಅವು ನಾವು ನೋಡುತ್ತಿರುವ ಎಡೆಯಿಂದ ಒಂದೇ ಸಾಲಿನಗುಂಟ ಇರುವುದರಿಂದ ಹಾಗೆ ಪಕ್ಕಪಕ್ಕದಲ್ಲಿ ಕಾಣುತ್ತಿರುತ್ತವೆ, ಸಾಮಾನ್ಯವಾಗಿ. ಆದರೆ, ಇಲ್ಲಿ ಮಾತ್ರ ಹಾಗಲ್ಲ. ವಸಿಷ್ಠ (Mizar) ಮತ್ತು ಅರುಂಧತಿ (Alcor), ನಿಜವಾಗಿ ಒಂದು ತಾರಾಜೋಡಿ. ಅಂದರೆ, ಸೂರ್ಯನ ಸುತ್ತ ಭೂಮಿ, ಇತರ ಗ್ರಹಗಳೂ ಸುತ್ತುವ ಹಾಗೆ, ವಸಿಷ್ಠನ ಸುತ್ತ ಅರುಂಧತಿ ಸುತ್ತುತ್ತಲಿದೆ. ಆದರೆ, ಇನ್ನೂ ಒಂದು ಹೆಚ್ಚಿನ ಗಮ್ಮತ್ತಿದೆ ಇದರಲ್ಲಿ. ಯಾಕಂದ್ರೆ, ವಸಿಷ್ಠ ಅಂತ ನಾವು ಯಾವುದಕ್ಕೆ ಹೇಳುತ್ತೀವೋ, ಅದು ಒಂದು ಜೋಡಿತಾರೆ (Binary) – ಅಂದರೆ ಎರಡು ನಕ್ಷತ್ರಗಳ ಒಂದು ಕೂಟ. ಚಿಕ್ಕ ದೂರದರ್ಶಕಗಳಲ್ಲೂ, ಇದನ್ನು ಎರಡಾಗಿ – Mizar A ಮತ್ತು Mizar B – ನೋಡಬಹುದು. ಅದೇ ರೀತಿ, ಅರುಂಧತಿ ಕೂಡ ಒಂದು ಜೋಡಿ ತಾರೆ. ಇಷ್ಟು ಸಾಲದು ಅಂತ Mizar-A ಮತ್ತು Mizar-B ಗಳು ಕೂಡ ಜೋಡಿಗಳೇ. ಇದನ್ನ ದೂರದರ್ಶಕದಲ್ಲಿ ಕಾಣೋಕಾಗೋಲ್ಲ, ಆದರೆ ವರ್ಣಪಟಲದ (Spectroscope) ಸಹಾಯದಿಂದ ಇದನ್ನ ಪತ್ತೆ ಹಚ್ಚಿದ್ದಾರೆ. ಹಾಗಾಗಿ, ನಮಗೆ ಕಾಣೋ ಈ ವಸಿಷ್ಠ-ಅರುಂಧತಿಯಲ್ಲಿ ಇರೋದು ಆರು ತಾರೆಗಳ ಒಂದು ಕೂಟ!

LEAVE A REPLY

Please enter your comment!
Please enter your name here