ಕರ್ನಾಟಕ ಅಂದಕೂಡಲೆ ನಾವೆಲ್ಲ ಸಾಮಾನ್ಯವಾಗಿ ಯೋಚಿಸುವ ಜಾಗಗಳೆಂದರೆ ಮಂಗಳೂರು ಮತ್ತು ಕೊಡಗು. ಕೆಲವು ಬಾರಿ ಜನರಿಗೆ ಕಡಿಮೆ ತಿಳಿದಿರುವ, ಅಷ್ಟೇನೂ ಪ್ರಸಿದ್ಧವಲ್ಲದ ಸ್ಥಳಗಳಿಗೆ ಹೋಗುವುದು ಹೊಸ ಅನುಭವವನ್ನು ನೀಡುತ್ತದೆ. ಅಂತಹ ಮನೋಹರವಾದ ಜಾಗಗಳು ನಮ್ಮ ಪ್ರವಾಸದ ಸಂತೋಷವನ್ನು ಇಮ್ಮಡಿಗೊಳಿಸುತ್ತವೆ. ಅಂತಹ ಅದ್ಭುತ ಜಾಗಗಳು ಯಾವುವು ನೋಡೋಣ ಬನ್ನಿ…

ಹೊನ್ನೆಮರಡು

ಸಾಗರ ತಾಲೂಕಿನ ಶರಾವತಿ ನದಿಯ ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಲ್ಲಿರುವ ಒಂದು ಪುಟ್ಟ ಗ್ರಾಮ. ಪಕ್ಷಿ ವೀಕ್ಷಣೆ, ಕ್ಯಾಂಪಿಂಗ್, ಚಾರಣ ಮತ್ತು ಸೂರ್ಯಾಸ್ತ ವೀಕ್ಷಣೆ ಇಲ್ಲಿಯ ಆಕರ್ಷಣೆ. ’ಅಡ್ವೆಂಚರರ್ಸ್’ ಎಂಬ ಗುಂಪು ಇಲ್ಲಿ ಕ್ಯಾಂಪಿಂಗ್ ವ್ಯವಸ್ಥೆ ಮಾಡುತ್ತದೆ. ಮೊದಲೇ ಕಾಯ್ದಿರಿಸುವುದು ಕಡ್ಡಾಯ.

ಸೋಮನಾಥಪುರ

ಮೈಸೂರಿನಿಂದ ಸುಮಾರು ೪೦ ಕಿ.ಮೀ.ದೂರದಲ್ಲಿರುವ ಈ ಊರು ಪುರಾತನ ಚೆನ್ನಕೇಶವ ದೇವಾಲಯಕ್ಕೆ ಪ್ರಸಿದ್ಧಿ. ಹೊಯ್ಸಳ ಶೈಲಿಯ ಈ ದೇವಾಲಯವು ಈಗ ಎ.ಎಸ್.ಐ. ನಿಂದ ನಡೆಸಿಕೊಂಡು ಬರುತ್ತಿರುವ ಪಾರಂಪರಿಕ ಸ್ಥಳವಾಗಿದೆ.

ಕಾರವಾರ

ಉತ್ತರ ಕರ್ನಾಟಕದ ಕರಾವಳಿಯಾದ ಇಲ್ಲಿ, ಕಾಳಿ ಸೇತುವೆ, ಟ್ಯಾಗೋರ್ ಬೀಚ್, ಅಂಶಿ ರಾಷ್ಟ್ರೀಯ ಉದ್ಯಾನ ಮತ್ತು ಓಯೆಸ್ಟರ್ ರಾಕ್ ಲೈಟ್ ಹೌಸ್ ಇದೆ.

ಯಾಣ

ಉತ್ತರ ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶದಲ್ಲಿರುವ ಯಾಣ, ತನ್ನ ಅನೂಹ್ಯ ಕಲ್ಲಿನ ರಚನೆಗಳಿಗೆ ಹೆಸರುವಾಸಿ. ಪುರಾಣದ ಕಥೆಗಳಿಗೆ ಸಂಬಂಧಿಸಿದಂತೆ ಇದಕ್ಕೆ ಭೈರವೇಶ್ವರ ಶಿಖರ ಮತ್ತು ಮೋಹಿನಿ ಶಿಖರ ಎಂಬ ಹೆಸರೂ ಇದೆ. ಕುಮಟ, ಶಿರಸಿ ಮತ್ತು ಕಾರವಾರದ ಮೂಲಕ ಇಲ್ಲಿಗೆ ಹೋಗಬಹುದಾಗಿದೆ.

ವೇಣೂರು

ಬೆಳ್ತಂಗಡಿಯಲ್ಲಿರುವ ಈ ಐತಿಹಾಸಿಕ ಸ್ಥಳದಲ್ಲಿ ಅಜಿಲ ವಂಶಸ್ಥನಾದ ಬಾಹುಬಲಿಯ ಏಕಶಿಲಾ ಮೂರ್ತಿಯಿದೆ. ಜೈನರ ಪುಣ್ಯಕ್ಷೇತ್ರಗಳಲ್ಲಿ ಇದೊಂದು.

ಆಗುಂಬೆ

ತನ್ನ ಅಮೂಲ್ಯ ಸಸ್ಯಸಂಪತ್ತು ಮತ್ತು ಸೂರ್ಯಾಸ್ತಕ್ಕೆ ಹೆಸರುವಾಸಿಯಾದ ಆಗುಂಬೆಯಿರುವುದು ಶಿವಮೊಗ್ಗದಲ್ಲಿ. ದಕ್ಷಿಣದ ಚಿರಾಪುಂಜಿ ಎಂದೇ ಇದು ಚಿರಪರಿಚಿತ.

ಇಕ್ಕೇರಿ

ಕ್ರಿ.ಶ. ೧೫೬೪-೧೬೪೦ ರಲ್ಲಿ ಕೆಳದಿಯ ಅರಸರ ರಾಜಧಾನಿಯಾಗಿದ್ದ ಕೆಳದಿಯು ಅಘೋರೇಶ್ವರ ದೇವಾಲಯಕ್ಕೆ ಪ್ರಸಿದ್ಧಿ. ಕದಂಬ ಮತ್ತು ಹೊಯ್ಸಳರ ಸಮ್ಮಿಶ್ರ ವಾಸ್ತುವಿನಲ್ಲಿರುವ ಈ ದೇವಾಲಯವು ಸಾಗರದಿಂದ ಸುಮಾರು ೧೦ ಕಿ.ಮೀ. ದೂರದಲ್ಲಿದೆ.

ಸಹಸ್ರಲಿಂಗ

ಶಿರಸಿಯ ಸಮೀಪವಿರುವ ಈ ಐತಿಹಾಸಿಕ ಜಾಗದಲ್ಲಿ ಸುಮಾರು ೧೦೦೦ ಶಿವಲಿಂಗಗಳಿವೆ. ಶಾಲ್ಮಲಾ ನದಿಯ ತೀರದಲ್ಲಿ ಕೆಲವು ಶಿವಲಿಂಗಗಳನ್ನು ಮಾತ್ರ ಈಗ ಕಾಣಬಹುದಾಗಿದೆ.

ದಾಂಡೇಲಿ

ಕಾಳೀ ನದಿಯ ದಡದಲ್ಲಿರುವ ಈ ಊರು ಸಾಹಸ ಕ್ರೀಡೆಗಳಿಗೆ ಹೆಸರುವಾಸಿ. ಪ್ರವಾಸಿಗರು ಇಲ್ಲಿ ನಿಸರ್ಗದಲ್ಲಿ ವಾಯುವಿಹಾರ, ಪಕ್ಷಿ ವೀಕ್ಷಣೆ, ಬೋಟಿಂಗ್, ರಿವರ್ ರಾಫ಼ಟಿಂಗ್, ಆಂಗ್ಲಿಂಗ್ ಮೊದಲಾದುವನ್ನು ಮಾಡಬಹುದು.

ಮುತ್ತತ್ತಿ

ಬೆಂಗಳೂರಿನಿಂದ ಸುಮಾರು ೧೦೦ ಕಿ.ಮೀ. ದೂರದಲ್ಲಿರುವ ಮುತ್ತತ್ತಿಯು ಕಾವೇರಿ ನದಿ ದಡದಲ್ಲಿದೆ. ಮುತ್ತತ್ತಿ ಮತ್ತು ಭೀಮೇಶ್ವರಕ್ಕೆ ಬೆಂಗಳೂರಿನಿಂದ ಒಂದು ದಿನದ ಪ್ರವಾಸದ ಯೋಜನೆ ಹಾಕಿಕೊಳ್ಳಬಹುದು.

ಲೇಖನ: ಅಶ್ವಿನಿ ಪ್ರಕಾಶ್ 

LEAVE A REPLY

Please enter your comment!
Please enter your name here