ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಘೋಷಿಸಲ್ಪಟ್ಟ 6 ವರ್ಷ ವಯಸ್ಸಿನ ಬಾಲಕಿಯ ಹೆತ್ತವರು ಆಕೆಯ ಅಂಗಗಳನ್ನು ದಾನ ಮಾಡುವ ಮೂಲಕ ಐವರು ರೋಗಿಗಳಿಗೆ ಮರು ಜೀವ   ನೀಡಿದ್ದಾರೆ. ಕರ್ನಾಟಕ ರಾಜ್ಯದ ಚಿತ್ರದುರ್ಗದ ಆರು ವರ್ಷದ ಬಾಲಕಿ ಜಾಹ್ನವಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯ ವೈದ್ಯರು ಮೆದುಳು ನಿಷ್ಕ್ರಿಯಗೊಂಡಿರುತ್ತಾಳೆ ಎಂದು ಘೋಷಿಸಿದ್ದರು. ಈ ಮೂಲಕ ಆಕೆ ಅತಿ ಕಿರಿಯ ವಯಸ್ಸಿನ ಅಂಗಾಂಗ ದಾನಿ ಎಂದು ಗುರುತಿಸಿಕೊಂಡಿದ್ದಾಳೆ.

ವರದಿಯ ಪ್ರಕಾರ, ಆಕೆಯ ಹೃದಯವನ್ನು ಆಂಧ್ರಪ್ರದೇಶದ ವಿಶಾಖಪಟ್ಟಣದ 9 ವರ್ಷದ ಬಾಲಕನಿಗೆ ಯಶಸ್ವಿಯಾಗಿ ಕಸಿ ಮಾಡಲಾಗಿದೆ.

ಮಗುವಿನ ಹೆತ್ತವರು ಆಕೆಯ ಕಣ್ಣುಗಳು ಮತ್ತು ಮೂತ್ರಪಿಂಡವನ್ನೂ ದಾನ ಮಾಡಿದ್ದಾರೆ.

ಹುಡುಗಿಯ ತಂದೆ ತಿಪ್ಪೇಸ್ವಾಮಿ ಹೇಳುವಂತೆ ಅವರಿಗೆ ಮಗಳು ಇನ್ನಿಲ್ಲ ಎಂಬುದನ್ನು ನಂಬಲು ಸಾಧ್ಯವಾಗುತ್ತಲೇ ಇಲ್ಲ. ” ಅವಳು ತುಂಬಾ ಚುರುಕಿನ ಹುಡುಗಿ. ಒಂದು ತಿಂಗಳ ಹಿಂದೆಯಷ್ಟೇ ಅವಳು ಹೊಟ್ಟೆ ನೋವು ಎಂದು ಹೇಳುತ್ತಿದ್ದಳು. ಅಲ್ಲದೇ, ಆಗಾಗ ತಲೆಸುತ್ತೂ ಬರುತ್ತಿತ್ತು. ಆಕೆಗೆ ತನ್ನ ಪುಸ್ತಕಗಳಲ್ಲಿ ಬರೆಯಲೂ ಅಸಾಧ್ಯವಾದಾಗ ನಾವು ಆಸ್ಪತ್ರೆಗೆ ಹೋಗಿ ಸಂಪೂರ್ಣ ತಪಾಸಣೆ ಮಾಡಿಸಲು ತೀರ್ಮಾನಿಸಿದೆವು” ಎನ್ನುತ್ತಾರೆ.

ಚಿತ್ರದುರ್ಗದ ಒಂದು ಖಾಸಗಿ ಆಸ್ಪತ್ರೆಗೆ ಮೊದಲು ಕರೆದುಕೊಂಡು ಹೋದರೂ, ಆಕೆಯ ಖಾಯಿಲೆಯ ಪತ್ತೆಯಾಗಲಿಲ್ಲ. ನಂತರ ಮಂಗಳೂರಿನ ಇನ್ನೊಂದು ಖಾಸಗಿ ಆಸ್ಪತ್ರೆಗೆ ಹೋಗಿ ಪರೀಕ್ಷಿಸಿದಾಗ ಆಕೆಯ ಮೆದುಳಿನಲ್ಲಿ ಗೆಡ್ಡೆಯಿರುವುದು ಕಂಡುಬಂದಿತು. ತಿಪ್ಪೇಸ್ವಾಮಿ ಹೇಳುವಂತೆ ಜಾಹ್ನವಿಯು ಆಸ್ಪತ್ರೆಯಲ್ಲಿ ಬಹಳ ಲವಲವಿಕೆಯಿಂದ ಇದ್ದಳು ಮತ್ತು ಪ್ರಾರಂಭದಲ್ಲಿ ವೈದ್ಯರು ಇವಳಿಗೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎಂದೇ ತಿಳಿದಿದ್ದರು. MRI Scan ಮಾಡಿದ ಬಳಿಕ ಮೆದುಳಿನಲ್ಲಿ ಗೆಡ್ಡೆ ಇರುವುದು ಕಂಡು ಬಂದಿತು.

ಜಾಹ್ನವಿಯನ್ನು ನಂತರ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಿದರು. ಮೆದುಳಿನ ಗೆಡ್ಡೆ ಮತ್ತು ಅದರ ನೀರಿನಂಶವನ್ನು ತೆಗೆಯಲು ಸುಮಾರು 14 ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಶಸ್ತ್ರಚಿಕಿತ್ಸೆಯಿಂದ ಆಗಬಹುದಾದ ಅಪಾಯಗಳ ಬಗ್ಗೆ ಜಾಹ್ನವಿಯ ಹೆತ್ತವರಿಗೆ ಮೊದಲೇ ವಿವರಿಸಲಾಗಿತ್ತು. ಶಸ್ತ್ರಚಿಕಿತ್ಸೆಯ ಬಳಿಕ ಆಕೆ ಬಹುತೇಕ ಕೋಮಾ ಸ್ಥಿತಿಯನ್ನು ತಲುಪಿದಳು. ಅವಳು ಕೆಲವು ಚಲನೆಗಳನ್ನು ಮಾಡಿದಳು ಮತ್ತು ಒಮ್ಮೆ ಕಣ್ಣು ತೆರೆದಿದ್ದಳು.  ನಂತರ ಆಕೆಯ ಹೆತ್ತವರಿಗೆ ಅವಳ ಮೆದುಳು ನಿಷ್ಕ್ರಿಯಗೊಂಡಿರುವ ಬಗ್ಗೆ ತಿಳಿಸಲಾಯಿತು. ವೈದ್ಯರು ಮತ್ತು ಅಂಗಾಂಗ ಕಸಿಯ ಸೌಕರ್ಯ ಒದಗಿಸುವ ಸರ್ಕಾರದ ಸಂಘಟಕರ ಬೇಡಿಕೆಯ ಮೇರೆಗೆ ಜಾಹ್ನವಿಯ ಹೆತ್ತವರು ಆಕೆಯ ಅಂಗಗಳನ್ನು ದಾನ ಮಾಡಲು ಒಪ್ಪಿದರು.

 

ಲೇಖನ: ಅಶ್ವಿನಿ ಪ್ರಕಾಶ್ 

LEAVE A REPLY

Please enter your comment!
Please enter your name here