ನಾವು ಹೆಚ್ಚಾಗಿ ಬೆಳಗಿನ ಉಪಹಾರಕ್ಕೆ ತಿಂಡಿಯನ್ನೇ ನೆಚ್ಚಿಕೊಂಡಿರುವವರು. ಈಗ ತಿಂಡಿಯ ಜಾಗಕ್ಕೆ ಹಣ್ಣಿನ ರಸ, ಕಾರ್ನ್ ಫ್ಲೇಕ್ಸ್ ಬಂದಿದೆ. ಆದರೆ ಖಾಲಿ ಹೊಟ್ಟೆಗೆ ಯಾವುದೆಲ್ಲ ಆಹಾರ ಉತ್ತಮ ಎಂಬ ಅರಿವು ಇರುವುದಿಲ್ಲ. ಹಾಗಿದ್ದಲ್ಲಿ ಇಲ್ಲೊಮ್ಮೆ ನೋಡಿ…ಯಾವುದು ಯೋಗ್ಯವಲ್ಲ?

• ಪೇಸ್ಟ್ರಿಗಳು ಮತ್ತು ಯೀಸ್ಟ್ ಬಳಸಿರುವ ಆಹಾರ- ಇವು ಹೊಟ್ಟೆಯ ಒಳಪದರದಕ್ಕೆ ಹಾನಿಯನ್ನುಂಟುಮಾಡುತ್ತದೆ ಮತ್ತು ಹೊಟ್ಟೆಯಲ್ಲಿ ವಾಯು ತುಂಬುವಂತೆಯೂ ಮಾಡುತ್ತದೆ.

• ಸಿಹಿ ಪದಾರ್ಥಗಳು- ಬೆಳಗ್ಗಿನ ಸಿಹಿ ಸೇವನೆಯು ಇನ್ಸುಲಿನ್ ಪ್ರಮಾಣವನ್ನು ಹೆಚ್ಚುಮಾಡುತ್ತದೆ. ಇದು ಈಗಷ್ಟೇ ಕೆಲಸ ಶುರುಮಾಡಿದ ಮೇದೋಜೀರಕ ಗ್ರಂಥಿಯ ಮೇಲೆ ಗಣನೀಯ ಪ್ರಮಾಣದ ಒತ್ತಡವನ್ನು ಸೃಷ್ಟಿಸುತ್ತದೆ. ಇದರಿಂದಾಗಿ ಡಯಾಬಿಟಿಸ್ ಬರಲೂಬಹುದು.

• ಮೊಸರು ಮತ್ತಿತರ ಹುದುಗು ಬಂದ ಆಹಾರಗಳು- ಮೊಸರನ್ನು ತಿಂದಾಗ ಉತ್ಪತ್ತಿಯಾಗುವ ಹೈಡ್ರೋಕ್ಲೋರಿಕ್ ಆಮ್ಲವು ಹೊಟ್ಟೆಯಲ್ಲಿರುವ ಲ್ಯಾಕ್ಟಿಕ್ ಆಸಿಡ್ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಬೆಳಗಿನ ಉಪಹಾರಕ್ಕೆ ಇದು ಒಳ್ಳೆಯದಲ್ಲ.

• ಗಟ್ಟಿ ನಾರಿನ ಆಹಾರಗಳು– ಇವು ಹೊಟ್ಟೆಯ ಒಳಗಿನ ತೆಳುವಾದ ಲೋಳೆಯ ಪದರವನ್ನು ಗಾಯಗೊಳಿಸುತ್ತವೆ.

 ಟೊಮ್ಯಾಟೋ- ಇದರಲ್ಲಿರುವ ದೊಡ್ಡ ಪ್ರಮಾಣದ ಟ್ಯಾನಿಕ್ ಆಸಿಡ್ ಹೊಟ್ಟೆಯಲ್ಲಿ ಆಸಿಡಿಟಿ ಉಂಟುಮಾಡಿ ಕೊನೆಗೆ ಅಲ್ಸರ್ ಆಗಲೂ ಕಾರಣವಾಗಬಹುದು.

 ಸೌತೆಕಾಯಿ ಮತ್ತಿತರ ಹಸಿ ತರಕಾರಿಗಳು- ಹಸಿ ತರಕಾರಿಗಳು ಅಮೈನೋ ಆಸಿಡ್‍ನ ಆಗರ ಹೌದು. ಆದರೆ ಖಾಲಿ ಹೊಟ್ಟೆಗೆ ತಿಂದಾಗ ಎದೆಯುರಿ, ವಾಯು ಮತ್ತು ಹೊಟ್ಟೆನೋವಿಗೆ ಕಾರಣವಾಗುತ್ತವೆ.

• ಬಾಳೆಹಣ್ಣು- ಖಾಲಿಹೊಟ್ಟೆಗೆ ಬಾಳೆಹಣ್ಣು ತಿಂದಾಗ ರಕ್ತದಲ್ಲಿ ಮೆಗ್ನೀಷಿಯಂ ಪ್ರಮಾಣ ಹೆಚ್ಚಿ ಹೃದಯಕ್ಕೆ ಹಾನಿಯುಂಟುಮಾಡಬಹುದು.

• ಮಸಾಲೆ- ಇವು ಹೊಟ್ಟೆಯ ಲೋಳೆಗೆ ಹಾನಿಮಾಡಿ ಕಿರಿಕಿರಿ ಉಂಟುಮಾಡುವುದಲ್ಲದೆ ಆಮ್ಲದ ಉತ್ಪಾದನೆಯನ್ನೂ ಹೆಚ್ಚಿಸುತ್ತದೆ. ಇದರಿಂದ ಅಜೀರ್ಣದಂತಹ ತೊಂದರೆಗಳು ಶುರುವಾಗಬಹುದು.

• ಹುಳಿ ಹಣ್ಣುಗಳು- ಈ ಹಣ್ಣಿನ ರಸದಲ್ಲಿರುವ ಸಿಟ್ರಿಕ್ ಮತ್ತಿತರ ಆಸಿಡ್‍ಗಳು ಎದೆಯುರಿ ಉಂಟುಮಾಡಿ, ಗ್ಯಾಸ್ಟ್ರೈಟಿಸ್ ಮತ್ತು ಗ್ಯಾಸ್ಟ್ರಿಕ್ ಅಲ್ಸರ್‍ಗಳು ಬರುವ ಸಂಭವವನ್ನು ಹೆಚ್ಚಿಸುತ್ತದೆ. ಹಾಗೆಯೇ ಹಣ್ಣಿನ ರಸದಲ್ಲಿರುವ ಫ್ರುಕ್ಟೋಸ್ ಎಂಬ ಸಕ್ಕರೆಯು ಜಠರಕ್ಕೆ ತೊಂದರೆಯನ್ನು ಮಾಡುತ್ತದೆ.

• ತಣ್ಣಗಿನ ಕಾರ್ಬೊನೇಟೆಡ್ ಪಾನೀಯಗಳು- ಇವು ಹೊಟ್ಟೆಯ ಲೋಳೆಯನ್ನು ಹಾಳುಮಾಡಿ ರಕ್ತದ ಹರಿವನ್ನು ಕಡಿಮೆಗೊಳಿಸುತ್ತದೆ. ಇದರಿಂದ ಆಹಾರ ಜೀರ್ಣವಾಗುವುದು ನಿಧಾನವಾಗುತ್ತದೆ. ಈ ಕಾರ್ಬೊನೇಟೆಡ್ ಆಸಿಡ್‍ಗಳು ಹೊಟ್ಟೆಯಲ್ಲಿರುವ ಆಸಿಡ್‍ಗಳೊಂದಿಗೆ ಸೇರಿ ಹೊಟ್ಟೆ ತೊಳೆಸುವುದು, ವಾಯುವಿನ ತೊಂದರೆ ಉಂಟಾಗಬಹುದು.

• ಚಹಾ/ಕಾಫಿ- ಬೆಳಗಿನ ನಿದ್ದೆಯನ್ನು ಹೊಡೆದೋಡಿಸಲು ಇವು ಸುಲಭದ ದಾರಿ. ಆದರೆ ಇದರಲ್ಲಿರುವ ಕೆಫೇನ್ ಅಂಶವು ಹೊಟ್ಟೆಯ ಜೀರ್ಣರಸದ ಉತ್ಪಾದನೆಯನ್ನು ಕಡಿಮೆಮಾಡುತ್ತದೆ. ಪಿತ್ತರಸದ ಸ್ರವಿಸುವಿಕೆಯು ಕಡಿಮೆಯಾಗಿ ಜೀರ್ಣಕ್ರಿಯೆ ನಿಧಾನವಾಗುತ್ತದೆ.

ಯೋಗ್ಯವಾದ ಆಹಾರ:ನಾವು ಬೆಳಿಗ್ಗೆ ಸೇವಿಸುವ ಎಷ್ಟೋ ಆಹಾರಗಳು ಖಾಲಿಹೊಟ್ಟೆಗೆ ಮಾಡುವ ಹಾನಿಯನ್ನು ನೋಡಿದೆವು. ಹಾಗಾದರೆ ಯಾವ ಆಹಾರವು ಬರಿಹೊಟ್ಟೆಗೆ ತಿನ್ನಲು ಯೋಗ್ಯ ಎಂದು ನೋಡೋಣ…

• ಓಟ್ಸ್– ಇವು ಹೊಟ್ಟೆಯೊಳಗೆ ನಿರ್ಮಿಸುವ ರಕ್ಷಾಪದರವು, ಹೈಡ್ರೋಕ್ಲೋರಿಕ್ ಆಮ್ಲವು ಮಾಡುವ ಹಾನಿಯಿಂದ ರಕ್ಷಣೆಯನ್ನು ನೀಡುತ್ತದೆ. ಓಟ್ಸ್‍ನಲ್ಲಿರುವ ಸುಲಭವಾಗಿ ಜೀರ್ಣವಾಗುವ ನಾರಿನಂಶವು ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ.

• ಗೋಧಿನುಚ್ಚಿನಲ್ಲಿ ತಯಾರಿಸಿದ ಪದಾರ್ಥಗಳು- ಪ್ರೊಟೀನ್, ಕಬ್ಬಿಣದ ಅಂಶ ಮತ್ತು ವಿಟಮಿನ್‍ಗಳ ಆಗರವಾದ ಇವು ಜೀರ್ಣಕ್ರಿಯೆಯನ್ನು  ಪ್ರಚೋದಿಸುತ್ತವೆ.

• ಮೊಟ್ಟೆ- ಸಂಶೋಧನೆಗಳ ಪ್ರಕಾರ ಬೆಳಗಿನ ಉಪಹಾರದಲ್ಲಿ ಮೊಟ್ಟೆಯ ಬಳಕೆಯು ನಮ್ಮ ಆಹಾರದಲ್ಲಿನ ಕ್ಯಾಲೊರಿ ಸೇವನೆಯನ್ನು ಕಡಿತಗೊಳಿಸುತ್ತದೆ.

• ಕಲ್ಲಂಗಡಿ ಹಣ್ಣು- ಇದು ಜಠರಕ್ಕೆ ಹೆಚ್ಚಿನ ದ್ರವಾಹಾರವನ್ನು ಒದಗಿಸುತ್ತದೆ. ಹಾಗೆಯೇ ಇದರಲ್ಲಿರುವ ಲೈಕೋಪೆನ್ ಎಂಬ ಫೈಟೋಕೆಮಿಕಲ್, ಕಣ್ಣು, ಹೃದಯ ಹಾಗೂ ಮೆದುಳಿನ ಆರೋಗ್ಯಕ್ಕೆ ಸಹಕಾರಿಯಾಗಿದೆ.

• ಯೀಸ್ಟ್ ರಹಿತ ಇಡಿ ಗೋಧಿಯ ಬ್ರೆಡ್- ಇದರಲ್ಲಿರುವ ಕಾರ್ಬೋಹೈಡ್ರೇಟ್ ಮತ್ತಿತರ ಪೋಷಕಾಂಶಗಳು ಶರೀರಕ್ಕೆ ಅತ್ಯಗತ್ಯವಾಗಿವೆ.

• ಜೇನು- ಇದು ನಿಮ್ಮ ಶರೀರವನ್ನು ಜಾಗೃತಗೊಳಿಸಿ ಶಾರೀರಿಕ ವ್ಯವಸ್ಥೆಗೆ ಶಕ್ತಿಯನ್ನು ನೀಡುತ್ತದೆ. ಮೆದುಳಿನ ಚಟುವಟಿಕೆಗಳನ್ನು ಉತ್ತೇಜಿಸಿ ‘ಫೀಲ್ ಗುಡ್’ ಹಾರ್ಮೋನ್ ಎಂದೇ ಕರೆಯಲ್ಪಡುವ ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸುತ್ತದೆ.

LEAVE A REPLY

Please enter your comment!
Please enter your name here