ಬಾಲಿವುಡ್‍ನ ದಂತಕತೆ ಹಿರಿಯ ನಟಿ ಶ್ರೀದೇವಿ (54) ಹೃದಯಾಘಾತದಿಂದ ದುಬೈಯಲ್ಲಿ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ.

ದುಬೈಗೆ ಶ್ರೀದೇವಿ ತಮ್ಮ ಪತಿ ಬೋನಿ ಕಪೂರ್ ಮತ್ತು ಕಿರಿಯ ಪುತ್ರಿ ಖುಷಿ ಜೊತೆ ಸಂಬಂಧಿಕರ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದರು. ಈ ಸಂದರ್ಭದಲ್ಲಿ ತೀವ್ರ ಹೃದಯಾಘಾತಗೊಂಡು ನಿಧನರಾಗಿದ್ದಾರೆ.

50ರ ವಯಸ್ಸಿನಲ್ಲಿಯೂ ನಾಯಕ ನಟನೊಬ್ಬ ಹೀರೋ ಆಗಿಯೇ ಮಿಂಚುವುದು ಸಾಮಾನ್ಯ. ಆದರೆ, 50ರಲ್ಲಿಯೂ ನಾಯಕಿಯಾಗಿ ತನ್ನ ಪ್ರತಿಭೆಯನ್ನು ತೋರಿಸಿದಾಕೆ ಶ್ರೀದೇವಿ. ಮಗಳು ಜಾಹ್ನವಿಯನ್ನು ಬಾಲಿವುಡ್ ಜಗತ್ತಿಗೆ ಪರಿಚಯಿಸುತ್ತಿದ್ದು, ಮಗಳ ಮೊದಲ ಚಿತ್ರ ‘ದಡಕ್’ನ ಮೊದಲ ಪೋಸ್ಟರ್‌ವೊಂದನ್ನು ತಮ್ಮ ಟ್ವೀಟರ್ ಪೇಜಿನಲ್ಲಿ ಪೋಸ್ಟ್ ಮಾಡಿದ್ದರು.

1963ರ ಆಗಸ್ಟ್ 13 ರಂದು ತಮಿಳುನಾಡಿನ ಶಿವಕಾಶಿಯಲ್ಲಿ ಜನಿಸಿದ್ದ ಶ್ರೀದೇವಿ 4ನೇ ವಯಸ್ಸಿನಲ್ಲೇ ತಮಿಳಿನ ‘ತುನೈವಾನ್’ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ್ದರು. 1971ರಲ್ಲಿ ಮಲೆಯಾಳಂನ ಪೂಂಪಟ್ಟಾ ಚಿತ್ರದಲ್ಲಿ ನಟಿಸಿದ್ದ ಶ್ರೀದೇವಿ ಅವರಿಗೆ ಅತ್ಯುತ್ತಮ ಬಾಲನಟಿ ಪ್ರಶಸ್ತಿ ಸಿಕ್ಕಿತ್ತು

13ನೇ ವಯಸ್ಸಿನಲ್ಲಿ ಜೂಲಿ ಚಿತ್ರದೊಂದಿಗೆ ಬಾಲಿವುಡ್‍ಗೆ ಎಂಟ್ರಿಕೊಟ್ಟ ಶ್ರೀದೇವಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ಹಿಂದಿ, ತಮಿಳು, ತೆಲುಗು, ಮಲೆಯಾಳಂ ಮತ್ತು ಕನ್ನಡದಲ್ಲಿ ನಟಿಸುವ ಮೂಲಕ ಪಂಚಭಾಷಾ ಕಲಾವಿದೆಯಾಗಿ ಪ್ರಸಿದ್ಧಿ ಪಡೆದಿದ್ದರು.


ಕನ್ನಡದ ಭಕ್ತಕುಂಬಾರ, ಬಾಲಭಾರತ, ಹೆಣ್ಣು ಸಂಸಾರದ ಕಣ್ಣು, ಯಶೋಧ ಕೃಷ್ಣ, ಸಂಪೂರ್ಣ ರಾಮಯಣ, ಪ್ರಿಯಾದಲ್ಲಿ ನಟಿಸಿದ್ದರು. ರೆಬಲ್ ಸ್ಟಾರ್ ಅಂಬರೀಶ್, ರಜನಿಕಾಂತ್ ಜೊತೆ ಅಭಿನಯಿಸಿದ್ದ ಶ್ರೀದೇವಿ 80ರ ದಶಕದಲ್ಲಿ ಬಾಲಿವುಡ್ ಪ್ರಸಿದ್ಧ ಕಲಾವಿದೆಯಾಗಿ ಮಿಂಚಿದ್ದರು.

ಸುಮಾರು ಒಂದೂವರೆ ದಶಕದ ಬ್ರೇಕ್ ನಂತರ ‘ಇಂಗ್ಲಿಷ್ ವಿಂಗ್ಲಿಷ್’ ಎಂಬ ಚಿತ್ರದ ಮೂಲಕ ಬಾಲಿವುಡ್‌ಗೆ ಮರು ಎಂಟ್ರಿ ನೀಡಿದ ಶ್ರೀದೇವಿ, ಮಧ್ಯಮ ವರ್ಗದ ಮಹಿಳೆಯೊಬ್ಬಳು ಇಂಗ್ಲಿಷ್ ಬಾರದೇ, ಆತ್ಮವಿಶ್ವಾಸದ ಕೊರತೆಯಿಂದ ಅವಮಾನ ಅನುಭವಿಸುವ ಕಂದಾ ಹಂದರವುಳ್ಳ ಚಿತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದರು. ಭಾಷೆ ಬಾರದೇ ವಿದೇಶಕ್ಕೆ ತೆರಳಿ, ಅಲ್ಲಿ ಇಂಗ್ಲಿಷ್ ಕಲಿತು, ತನ್ನ ಸಾಮಾರ್ಥ್ಯವನ್ನು ತೋರಿಸುವ ಈ ಮಹಿಳೆಯ ಕಥೆ ಭಾರತೀಯ ಹೆಣ್ಣು ಮಕ್ಕಳ ವಿಶ್ವಾಸ ಹೆಚ್ಚಿಸಿತ್ತು. ಮಾಮ್ ಈ ಎವರ್ ಗ್ರೀನ್ ನಟಿ ನಟಿಸಿದ ಕಡೆಯ ಚಿತ್ರ.

Actress Sridevi Kapoor arrives for the gala presentation of “English Vinglish” at the 37th Toronto International Film Festival, September 14, 2012. REUTERS/Mark Blinch (CANADA – Tags: ENTERTAINMENT)

1995ರಲ್ಲಿ ಸಿನಿಮಾ ನಿರ್ಮಾಪಕ ಬೋನಿ ಕಪೂರ್ ಅವರನ್ನು ವಿವಾಹವಾದ ಬಳಿಕ 15 ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದರು. 2012ರಲ್ಲಿ ‘ಇಂಗ್ಲಿಷ್ ವಿಂಗ್ಲೀಷ್’ ನಲ್ಲಿ ಅಭಿನಯಿಸುವ ಮೂಲಕ ಮತ್ತೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದರು.

ಹಾಸ್ಯ, ಭಾವನಾತ್ಮಕ, ಸಾಹಸ, ಪ್ರೇಮ, ಪ್ರಣಯ, ನೃತ್ಯ ಹೀಗೆ ಎಲ್ಲ ರೀತಿಯ ಪಾತ್ರಗಳಲ್ಲಿ ಸೈ ಎನಿಸಿಕೊಂಡ ಶ್ರೀದೇವಿಯರ ನಿಧನಕ್ಕೆ ಬಾಲಿವುಡ್ ಕಂಬನಿ ಮಿಡಿದಿದೆ. 2013ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡುವ ಮೂಲಕ ಶ್ರೀದೇವಿ ಅವರನ್ನು ಗೌರವಿಸಿತ್ತು.

LEAVE A REPLY

Please enter your comment!
Please enter your name here